ಗುರುವಾರ, ಜೂನ್ 13, 2019

ಜಂಬೋ , ಕೊಶಿ

Ko ಜಂಬೋ , ಕೊಶಿ s
ಒಂದು ದಿನ ಜಂಬೋ ಆನೆ ತನ್ನ ದೊಡ್ಡ  ಹೊಟ್ಟೆಯನ್ನು ತುಂಬಿಸಲು ಮನೆಯಿಂದ ಹೊರಟಿತು . ಪ್ರತಿ ದಿನ ಕಾಡಿನ ಸೊಪ್ಪು ಸದೆ ತಿಂದು ತಿಂದು ಬೇಜಾರಾಗಿದ್ದ ಜಂಬೊ ಇಂದು  , ಹಳ್ಳಿಯ ಕಡೆ ಹೋಗಿ ಆಹಾರ ಹುಡುಕುವ ಯೋಜನೆ ಮಾಡಿದ್ದ . ಅದರಂತೆ ಕಾಡಿನ ದಾರಿ ಸವೆದು ಹಳಿಯ ಬಯಲು ದಾಟಿ , ಒಂದು ಕಬ್ಬಿನ ಗದ್ದೆಯನ್ನು ಕಂಡು , ಕಣ್ಣರಳಿ ಜಂಬೊ ಗದ್ದೆಗೆ ಲಗ್ಗೆ ಹಾಕಿದ

ರಸವತ್ತಾಗಿ ಬೆಳೆದು ನಿಂತಿದ್ದ , ಕಬ್ಬನ್ನು ತನ್ನ ಸೊಂಡಿಲಿನಿಂದ ಮುರಿದು , ಜಗಿದು , ಚೆನ್ನಾಗಿ ಅದರ ರಸ ಸವಿದು ಸಂಭ್ರಮಿಸಿದ .ಮನಸ್ಫೋರ್ತಿಯಾಗಿ ಕಬ್ಬನ್ನು ಪೂರೈಸಿದ ಬಳಿಕ , ಅಲ್ಲೇ ಹತ್ತಿರದಲ್ಲಿದ್ದ ಕೆರೆಯಲ್ಲಿ ತೃಪ್ತಿಯಾಗುವಷ್ಟು ನೀರು ಕುಡಿದ .ತಿಂದು ಕುಡಿದು ಆದ ಮೇಲೆ ಹೊಟ್ಟೆ ಬಾರವಾಗಿ , ಹಾಗೆ ನಿದ್ದೆ ತೇಲಿಸಲು , ಸುತ್ತ  ವಿಶ್ರಾಂತಿಗಾಗಿ ಕಣ್ಣು ಹಾಯಿಸಿದ .ಅಲ್ಲೇ ಸ್ವಲ್ಪ ದೊರರಾದಲ್ಲಿ ಒಂದು ದೊಡ್ಡ ಮರ ಕಾಣಲು, ಅದರ ಬಳಿ ಮೆಲ್ಲನೆ ಹೆಜ್ಜೆ ಹಾಕಿ , ಹೊರಲಾರದ ಹೊಟ್ಟೆಯನ್ನು ಹೊತ್ತು , ಹೇಗೋ ಮರವನ್ನು ತಲುಪಿ , ಮರದ ಕೆಳಗೆ ವಿಶ್ರಾಂತಿಗಾಗಿ  ನಿಂತ . ಸ್ವಲ್ಪ ಸಮಯದ ಬಳಿಕ  "ಸಹಾಯ ಮಾಡಿ,ದಯವಿಟ್ಟು ಯಾರಾದರು ಇದ್ದಾರ ಸಹಾಯ ಮಾಡಿ" ಎಂದು ಒಂದು ಸಣ್ಣ ಧನಿ ಅಂಗಲಾಚುವುದುಕಿವಿಗೆ ಬಿತ್ತು . ತಕ್ಷಣ ನಿದ್ದೆ ಯಿಂದ ಎಚ್ಚೆತ್ತ ಜಂಬೊ , ಮರದ ಸುತ್ತ ಒಂದು ಪ್ರದಕ್ಶಿಣೆ ಬರಲು ಆಗ ಧ್ವನಿ ಮರದ ಕೆಳಗಿನ ಸಣ್ಣ ಪೊಟರೆಯಿಂದ ಬರುವುದು ಅರಿವಾಗಿ , ಯಾರದು ಪೊಟರೆಯ ಹಿಂದೆ ಎಂದು ಕೇಳಿತು. ಆಗ ಪೊಟರೆಯಿಂದ "ನಾನು ಕೊಶಿ, ಮೊಲ . ಕೇಡಿ ತೋಳವೊಂದು, ನನ್ನನ್ನು ನನ್ನ ಮನೆಯಲ್ಲೇ ಕೊಡ್ಡಿ ಹಾಕಿದೆ. ನಾನು ಒಳಗೆ ಇರುವ ಸಮಯ ನೋಡಿ , ಮುಂದಿನ ಬಾಗಿಲಿಗೆ ದೊಡ್ಡ ಕಲ್ಲೊಂದನ್ನು ಎಳೆದು ಹೋಗಿದೆ . ಅದನ್ನು ನನ್ನ ಕೈಯಿಂದ, ತೆಗೆಯುವುದು ಇರಲಿ , ಅಲ್ಲಾಡಿಸುವುದು ಸಾಧ್ಯವಿಲ್ಲ . ಹೇಗಾದರೂ ನನನ್ನು ಉಳಿಸಿ ಎಂದು ಕೊಶಿ ಬೇಡಿಕೊಂಡಿತು. ಬಾರಿ ಗಾತ್ರದ ಜಂಬೊ , ತನ್ನ ಎದುರಿಗಿದ್ದ ದೊಡ್ಡ  ಕಲ್ಲನು !! ಒಂದೇ ಸಾಲಕ್ಕೆ ತನ್ನ ಎಡ ಕಾಲಿನಿಂದ ಒದ್ದು , ಪೊಟರೆಯ ಬಾಗಿಲು ತೆರೆಯಿತು . ತಕ್ಷಣ ಒಳಗಿದ್ದ ಕೊಶಿ ಆಚೆಗೆ ಹಾರಿ , ತನನ್ನು ಕಾಪಾಡಿದ ಜಾಂಬೋವಿಗೆ ಧನ್ಯವಾದ ಹೇಳಿತು. ಅಂದಿನಿಂದ  ಹಳ್ಳಿಗೆ ಬಂದಾಗಲೆಲ್ಲ ಜಂಬೊ ಕೋಶೀಯ ಜೊತೆ ಅಡ್ಡಾಡುತ್ತಿತ್ತು . ಕೊಶಿಗೆ ಕಾಡು ನೋಡುವ ಆಸೆ ಅದಾಗಲೆಲ್ಲ , ಜಂಬೊ ಅದನ್ನು ತನ್ನ ಮೇಲೆ ಕೂರಿಸಿಕೊಂಡು ಕಾಡಿನ ಸವರಿ ಮಾಡಿಸುತಿತ್ತು . ಕೊಶಿ ಮತ್ತು ಜಂಬೊ ಒಳ್ಳೆಯ ಸ್ನೇಹಿತರಾಗಿ , ಬದುಕಿದವು 

ಶುಕ್ರವಾರ, ನವೆಂಬರ್ 3, 2017

NaughtyMonkey

ದೊಡ್ಡ ಕಾಡಿನ ಶಾಲೆಗೆ ಉದ್ದ ಕತ್ತಿನ ಜಿರಾಫೆ ಟೀಚರ್ ! ಆನೆ , ಸಿಂಹ , ಹುಲಿ, ಕರಡಿ, ಮಂಗ , ನರಿ, ತೋಳ ,ಜಿಂಕೆ ಹೀಗೆ ಎಲ್ಲ ಹತ್ತು ಹಲವು ಪ್ರಾಣಿ- ಪಕ್ಷಿಗಳ ಮರಿಗಳು ಒಟ್ಟಿಗೆ ಒಂದೇ ಶಾಲೆಯಲ್ಲಿ ಕಲಿಯುತ್ತಿದವು. ಈಗ ಹೇಳುವ ಕಥೆ ಶಾಲೆಯಲ್ಲಿ ಕಲಿಯುತಿದ್ದ ಮಹಾ ಗರ್ವಿ ಮಂಗನದು .  ಇತರ ಪ್ರಾಣಿಗಳನ್ನು ಸದಾ ಕೆದುಕುವುದು , ಉಪದ್ರ ಮಾಡುವುದು ಇದೆ ಅದರ ದಿನ ನಿತ್ಯದ ಕೆಲಸ . ತಾನು ಎಲ್ಲರಿಗಿಂತ ಮಿಗಿಲಿನವನು ಎಂಬ ಭ್ರಮೆ ಅದಕ್ಕೆ. ಮಂಗನ

ಮಳೆಗಾಲದ ದಿನ . ಕಾಡಿನಲ್ಲಿ ಬಿಡದ ಹಾಗೆ ಮಳೆ ಸುರಿಯುತಿತ್ತು .ಜಂಬೊ  ಆನೆ , ಸ್ಟೈಲಿ ಸಿಂಹ , ಬೆಳಗಿನ ತಿಂಡಿ ಮುಗಿಸಿ , ಕೊಡೆ ಹಿಡಿದು ಶಾಲೆಗೇ ತೆರಳುತ್ತಿದ್ದವು .  ಹಾಗೆ ಹಾದಿ ನಡೆಯುತ್ತಿದ್ದಾಗ , ಯಾರೋ ದೂರದಲ್ಲಿ ಸಹಾಯಕ್ಕಾಗಿ ಕೂಗುತ್ತಿರುವುದು ಕೇಳಿತು. ಆನೆ ಸಿಂಹ ಗಳೆರಡೂ ಪರಸ್ಪರ ಒಬ್ಬರನೊಬ್ಬ ಮುಖ ನೋಡಿಕೊಂಡು , ಯಾರು ಸಹಾಯ ಅಪೇಕ್ಷಿಸುತ್ತಿದರೆ ಎಂದು ನೋಡಬೇಕೆಂದು , ಧ್ವನಿಯನ್ನೇ ಅರಸಿ ಅದು ಬರುತ್ತಿದ್ದ ದಿಕ್ಕಿನ ಕಡೆ ನಡೆದವು .

ಸ್ವಲ್ಪ ದೂರ ಹೋದ ಮೇಲೆ ಎದುರಿಗೆ ಇದ್ದ ಕೆಸರು ಗುಂಡಿಯಲ್ಲಿ ಯಾವದೋ ಮಂಗ ಬಿದ್ದಿರುವುದು ಕಂಡಿತು . ಹತ್ತಿರ ಹೋಗಿ ನೋಡಲು ಅರೆ ! ಇದು ನಮ್ಮ ಸಹಪಾಠಿ ಮೋಟು . ಮೋಟು ಇದೇನಾಯಿತು ನಿನಗೆ ಎಂದು ಜಂಬೊ ಕನಿಕರದಿಂದ ಕೇಳಲು . ಮರದಿಂದ ಮರಕ್ಕೆ ನೆಗೆಯುವ ವೇಳೆ ಆಯಾ ತಪ್ಪಿ ಕೆಸರು ಗುಂಡಿಯಲ್ಲಿ ಬಿದ್ದೆ . ಗುಂಡಿ ತುಂಬಾ ಆಳವಿದ್ದು ಮೇಲೆ ಬರಲು ಸಾಧ್ಯವಾಗುತ್ತಿಲ್ಲ. ನಾನು ಸತ್ತೇ ಎಂದು ಜೋರಾಗಿ ಅಳಲು ಶುರುಮಾಡಿತು .

ಯಾವಾಗಲೂ ಎಲ್ಲರನ್ನು ಹಂಗಿಸಿ , ರೇಗಿಸುತ್ತಿದ್ದ ಮೋಟು , ಇಂದು , ತನ್ನನ್ನು ಹೇಗೆದಾರು ಕೆಸರಿನಿಂದ ಹೊರಗೆ ತೆಗೆಯುವಂತೆ ಸ್ಟೈಲಿ ಮತ್ತು ಜಂಬೊವನ್ನು ಅಂಗಲಾಚಿತು. ಅದಕ್ಕೆ ಸಹಾಯ ಮಾಡ್ಬೇಕೆಂದು ಮನಸು ಇದ್ದರೂ  , ಹೇಗೆ ಮೋಟುವನ್ನು ಮೇಲೆ ಎಳೆಯುವುದು , ಎಂದು ತಿಳಿಯದು . ಅಷ್ಟು ದೊಡ್ಡ ದೇಹ ಇದ್ದರು , ಜಂಬೊ ಗೆ ಕೆಸರಿನಲ್ಲಿ ಇಳಿಯಲು ಭಯ, ಎಲ್ಲಿ ಕೆಸರಲ್ಲಿ ನಾನು ಹೂತುಹೋಗುವೆನೋ ಎಂದು . ಇನ್ನು ಜಂಬೊ ಧೈರ್ಯ ಮಾಡದೆ ಸಿಂಹ ಕ್ಕೆ ಏನು ಮಾಡಲು ತೋಚದು. ಆನೆ ಸಿಂಹ ಗಳೆರೆಡು ಬೆಪ್ಪಾಗಿ ಮೋಟುವನ್ನು ನೋಡುತ್ತಾ ನಿಂತವು

ಅಷ್ಟರಲ್ಲಿ ತನ್ನ ಪಾಡಿಗೆ ಸಿಳ್ಳೆ ಹೊಡೆಯುತ್ತ , ವಿಕ್ಕಿ ನರಿ ಶಾಲೆಗೇ ಅದೇ ದಾರಿಯಲ್ಲಿ ಸಾಗುತಿತ್ತು . ಆನೆ ,ಸಿಂಹ ಬೆಪ್ಪಾಗಿ ಕೆಸರಿನ ಗುಂಡಿಯ ಬಳಿ ನಿಂತಿರುವುದನ್ನು , ತನ್ನ ಕೊಡೆಯ ಅಂಚಿನಿಂದ ನೋಡಿದ ವಿಕ್ಕಿ, ಏನೋ ತೊಂದರೆ ಆಗಿರಬಹುದೆಂದು ಎಣಿಸಿ , ಅವೆರಡರ ಬಳಿಗೆ ಓಡಿತು . ಅಷ್ಟರಲ್ಲಿ ಮೋಟು ಮಂಗ ನ ಮುಕ್ಕಾಲು ಶರೀರ ಕೆಸರಿನಲ್ಲಿ ಸ್ವಲ್ಪ ಸ್ವಲ್ಪವೇ ಕುಸಿಯುತಿತ್ತು . ಇದನ್ನು ಕಂಡ ನರಿ ತಕ್ಷಣ , ಸುತ್ತ ಕಣ್ಣಾಡಿಸಿತು . ಅಲ್ಲೇ ಹತ್ತಿರದಲ್ಲೇ ಆಲದ ಮರವೊಂದಿತ್ತು . ತನ್ನ ಚಾಣಾಕ್ಷ ಬುದ್ದಿಯನ್ನು, ಚುರುಕುಗೊಳಿಸಿ , ಅದರ ಬೇರೆಗಳನ್ನು ಕತ್ತರಿಸಿ , ಅದರಿಂದ ಹಗ್ಗ ಹೊಸೆದು , ಮೋಟು ವನ್ನು ಹೊರಗೆ ತೆಗೆಯಬಹುದೆಂದು ಯೋಚಿಸಿತು .

ನರಿಯ ಸಮಯೋಚಿತ ಉಪಾಯಕ್ಕೆ ತಲೆದೂಗಿದ , ಸಿಂಹ ತನ್ನ ಚೂಪಾದ ಹಲ್ಲಿನಿಂದ, ಮರದ ಬೇರುಗಳನ್ನು ಕತ್ತರಿಸಿತು. ನರಿ ಅದನ್ನು ಹಗ್ಗದ ಹಾಗೆ ಹೊಸೆದು , ಒಂದು ಕೊನೆಯನ್ನು ಮೋಟುವಿನ ಕಡೆಗೆ ಎಸೆದು, ಇನ್ನೊಂದನ್ನು ಜಂಬೊವಿನ ಕಾಲಿಗೆ ಬಿಗಿಯಿತು. ಜಂಬೊ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮೋಟುವನ್ನು ಎಳೆದು ಕೆಸರಿನಿಂದ ಹೊರಗೆ ಹಾಕಿತು .

ಬದುಕಿದೆಯಾ ಜೀವ ಎಂದು . ಮಂಗಾ ಪಿಳಿ ಪಿಳಿ ಕಣ್ಣು ಬಿಟ್ಟಿತ್ತು. ತನ್ನನ್ನು ಕಾಪಾಡಿದ , ಸಿಂಹ, ಆನೆ ಮತ್ತು ನರಿಗಳಿಗೆ , ಧನ್ಯವಾದ ಹೇಳಿತು .ತಾನೇ ಎಲ್ಲರಿಗಿಂತ ಮಿಗಿಲು ಎಂಬ ಅಹಂಕಾರ ಇಳಿದು, ಮೋಟು ಮಂಗಾ ಕುಗ್ಗಿದ.

ಸೋಮವಾರ, ಅಕ್ಟೋಬರ್ 9, 2017

Pebbe

ಹಿಮಕರಡಿ (ಪೆಬ್ಬೆ)

ಒಂದು ದಿನ ಹಿಮಕರಡಿ ಮರಿಯೊಂದು ತನ್ನ ಮನೆಯ ಮುಂದೆ ಸಪ್ಪೆ ಮುಖ ಮಾಡಿಕೊಂಡು ಕುಳಿತಿತ್ತು . ತನ್ನ ಅಣ್ಣ ಅಕ್ಕಂದಿರು ಎಲ್ಲ ಶಾಲೆಗೆ ತೆರಳಿದ್ದರು.  ಅಮ್ಮ ಮನೆಯಲ್ಲೇ ಇದ್ದರು , ಅಡುಗೆ ಮನೆಯಲ್ಲಿ ಅವಳಿಗೆ ಉಸಿರಾಡಲು ಪುರುಸೊತ್ತು ಇಲ್ಲದಷ್ಟು ಕೆಲಸ. ಆಟವಾಡಲು ಯಾರಾದರೂ ಸಿಗಬಹುದೇ ಎಂದು ದಾರಿ ನೋಡುತ್ತಾ ಕುಳಿತಿದ್ದ ಪೆಬ್ಬೆ. ಅಷ್ಟರಲ್ಲಿ ಅವನ ಅಮ್ಮ ಕರೆದದ್ದು ಕೇಳಿ , ಆಟವಾಡಲು ಕರೆಯುತ್ತಿದಾಳೆ ಎಂದು ಖುಷಿಯಲ್ಲಿ ಒಳಗೆ ಓಡಿತು .

ಸಂಜೆ ತಿಂಡಿ ಗೆ ಪಾಯಸ ಮಾಡುವಾದಾಗಿ ಯೋಚಿಸ್ಸಿದ್ದ ತಾಯಿ , ಮನೆಯಲ್ಲಿ ಸಕ್ಕರೆ ಖಾಲಿ ಯಾಗಿರಿವುದನ್ನು ನೋಡಿ , ಅದನ್ನು ತರಲು ಪೆಬ್ಬೆಯನ್ನು ಕರೆದಿದ್ದಳು . "ಪೆಬ್ಬೆ ಅಂಗಡಿ ಗೆ ಹೋಗಿ ಕೆಜಿ ಸಕ್ಕರೆ ತಾ, ನಿನ್ನ ಅಣ್ಣ ಅಕ್ಕ ಶಾಲೆ ಇಂದ ಬರುವು ವೇಳೆಗೆ ಪಾಯಸ ಮಾಡುವೆ , ಎಲ್ಲರು ತಿನ್ನುವ" ಎಂದು ಅದರ ಕೈಗೆ ಚೀಲ ಮತ್ತು ಹಣವನ್ನು ನೀಡಿದಳು . ಆಟವಾಡಲು ಕರೆಯುತ್ತಿದಾಳೆ ಎಂದು ನೆನೆಸಿದ ಪೆಬ್ಬೆಗೆ ತುಸು ನಿರಾಸೆ ಯಾದರು , ಅಂಗಡಿಗೆ ಹೋಗುವ ಕೆಲಸ ಮನೆಯ ಮುಂದೆ ದಾರಿ ಕಾಯುವುದಕ್ಕಿಂತ ಲೇಸು ಎನ್ನಿಸಿ , ಚೀಲ ಹಿಡಿದು ಅಂಗಡಿಯ ಕಡೆ ಹೊರಟಿತು .

ಹಿಮದಿಂದ ಆವರಿಸಿದ ಬೆಟ್ಟ ಗುಡ್ಡಗಳ ಹತ್ತಿ ಇಳಿಯುತ್ತ  ಸಾಗಿದ್ದ ಪೆಬ್ಬೆ ಇದ್ದಕ್ಕಿದ್ದ ಹಾಗೆ ಏನೆನ್ನೋ ನೆನಸಿಕೊಂಡು ಹಾಗೆ  ಹಿಂದೆ ತಿರುಗಿ ಅಲ್ಲೇ ಇದ್ದ ಹಿಮ ಸರೋವರವನ್ನು ನೋಡಿ ,ಅದರಲ್ಲಿ ಇರುವು ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ತಿನ್ನುವ , ನೀರಲ್ಲಿ ಆಟವಾಡುವ ಆಸೆಯಿಂದ ಕಿರುನಗೆ ಬೀರುತ್ತಾ ಅದರ ಕಡೆಗೆ ಹೆಜ್ಜೆ ಹಾಕಿತು . ಇನ್ನು ಸಣ್ಣವನಾಗಿದ್ದ ಪೆಬ್ಬೆಗೆ ಗೆ ಮೀನು ಹಿಡಿಯುವುದು ಅಷ್ಟು ಸರಿಯಾಗಿ ಬರುತ್ತಿರಲಿಲ್ಲ . ಅಲ್ಲದೆ ಸರೋವರದಲ್ಲಿ ಇರಬಹುದಾದ ದೊಡ್ಡ ಮೀನುಗಳಿಂದ ಪೆಬ್ಬೆ ಗೆ ಅಪಾಯವಾಗಬಹುದು ಎಂದು ಅದರ ಅಪ್ಪ ಅಮ್ಮ ಅದಕ್ಕೆ ಸರೋವರದಲ್ಲಿ ಮೀನು ಹಿಡಿಯಲು ಬಿಟ್ಟಿರಲಿಲ್ಲ. ಆದರೆ ಈಗ ಯಾರು ತಡೆಯವರು ಇಲ್ಲದ ಕಾರಣ , ಪೆಬ್ಬೆ ಸರೋವರದ ಕಡೆಗೆ ಹೋಗುವು ಮೀನು ಹಿಡಿಯುವ ಧೈರ್ಯ ಮಾಡಿದ್ದ

ತನ್ನ ಮನಸಿಗೆ ತೃಪ್ತಿ ಆಗುವಷ್ಟು ಸಮಯ ಪೆಬ್ಬೆ ನೀರಿನಲ್ಲಿ ಆಟವಾಡಿತು . ಕೊರೆಯುವ ಹಿಮ ಸರೋವರದಲ್ಲಿ ಮಿಂದೆದ್ದು ಖುಷಿ ಪಟ್ಟಿತ್ತು  . ನೀರಿನ ಆಳದಲ್ಲಿ ಈಜಿ ಕಂಡ ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ಗುಳುಂ ಎನಿಸಿತು . ತನ್ನ ಸಾಮರ್ಥ್ಯಕ್ಕೆ ತಾನೇ ಗರ್ವ ಪಡುತಾ, ಅಪ್ಪ ಅಮ್ಮ ಗೆ ಬುದ್ದಿ ಇಲ್ಲ , ನಾನು ಒಳ್ಳೆಯ ಬೇಟೆಗಾರ, ಈಜುಗಾರ, ಇಂದು ಮನೆಗೆ ಹೋದ ಮೇಲೆ ಎಲ್ಲರಿಗು ತನ್ನ ಆಟಗಳ ವರ್ಣನೆ ಮಾಡುವೆ ಎಂದು ಯೋಚಿಸಿಕೊಂಡು ನೀರಿನಲ್ಲಿ ಮುಳುಗೇಳುತ್ತಿತ್ತು . ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ ಪೆಬ್ಬೆ , ದೊಡ್ಡ ಮೀನೊಂದು ತನ್ನ ಬಳಿ ಬರುವುದು ಕಾಣಲೇ ಇಲ್ಲ . ಇನ್ನೇನು ಆ ದೊಡ್ಡ ಮೀನು ಇದರ ಕಾಲಿಗೆ ಬಾಯಿ ಹಾಕುವಷ್ಟರಲ್ಲಿ , ಪೆಬ್ಬೆ ಎಚ್ಚೆತ್ತು ಮೇಲಕ್ಕೆ ಈಜಿತು . ಆದರೆ ಬಿಡದ ದೊಡ್ಡ ಮೀನು ಇದನ್ನು ಹಿಂಬಾಲಿಸಿ ತಿನಲ್ಲೂ ಯತ್ನಿಸ್ತು. ಆದ್ರೆ ಪೆಬ್ಬೆ ಅದೃಷ್ಟವಶಾತ್ ಹೇಗೋ ತಪ್ಪಿಸಿಕೊಂಡು ಜೀವಕ್ಕೆ ಜೀವ ಬಿಡುತ್ತ ಸರೋವರದಿಂದ ಮೇಲೆ ಓಡಿತು .

ಅಪ್ಪ ಅಮ್ಮ ನ ಮಾತನ್ನು ಕೇಳದೆ ವ್ಯರ್ಥ ಸಾಹಸಕ್ಕೆ ಹೊರಟಿದ್ದು ದೊಡ್ಡ ತಪ್ಪೆಂದು ಅರಿವಾಗಿ , ಇದು ಯಾವುದನ್ನು ಮನೆಯಲ್ಲಿ ಯಾರಿಗೂ ಹೇಳ್ಬಾರದು ಎಂದು ನಿರ್ಧರಿಸಿ ಅದೇ ಭಯದಲ್ಲಿ ಹೇಗೋ ಅಂಗಡಿಗೆ ತೆರಳಿ , ಸಕ್ಕರೆ ಖರೀದಿಸಿ , ಮನೆಗೆ ಸಾಗಿ ಅಮ್ಮನಿಗೆ ನೀಡಿತು . ಸಂಜೆ ಪಾಯಸ ತಿಂದು ಇನ್ನೇನು ಮಲುಗುವ ಸಮಯದಲ್ಲಿ , ಬೆಳ್ಳಿಗೆ ನಡೆದ ಎಲ್ಲ ಸಂಗತಿಗಳನ್ನು ಪೆಬ್ಬೆ ಅಮ್ಮನಲ್ಲಿ ಹೇಳಿತು , ಬೈಯ್ಯಬಹುದೆಂದು ನೆನಿಸಿದ್ದ ಪೆಬ್ಬೆಯ ಸಾಹಸಕ್ಕೆ ಖುಷಿ ಪಟ್ಟ ಅಮ್ಮ ಅದನ್ನು ತೋರ್ಪಡಿಸದೆ , ಮುಂದಿನ ಬಾರಿ ಒಬ್ಬನೇ ಸರೋವರದಲ್ಲಿ ಇಳಿಯಬಾರದೆಂದು ಆಣೆ ಮಾಡಿಸಿಕೊಂಡಳು .ಆಣೆ ಮಾಡಿದ ಪೆಬ್ಬೆ ಅಮ್ಮನ ಬಳಿ ಬೆಚ್ಚಗೆ ಮಲಗಿದ. 

ಗುರುವಾರ, ಜೂನ್ 15, 2017

Panchabootha

 ಪಂಚಭೂತಗಳು ಪ್ರಕೃತಿಯ ಮೂಲ ಧಾತುಗಳು .ಬ್ರಹ್ಮಾಂಡದ ಚರಾಚರಗಳು  ಪಂಚಭೂತಗಳಿಂದ ಆದದ್ದು .ಭೂಮಿ ಅಥವ ಪೃಥ್ವಿ ,ಜಲ ಅಥವ ನೀರು, ತೇಜಸ್ ಅಥವ ಬೆಂಕಿ,ಪವನ ಅಥವ ಗಾಳಿ, ಶೂನ್ಯ ಅಥವ ಆಕಾಶ  ಇವೆ ಆ ಐದು ಪಂಚ ಮಹಾಭೂತಗಳು . ಪಂಚಮಹಭೂತಗಳ ಸಿದ್ದಾಂತ  ಕೇವಲ ಭಾರತದಲ್ಲ  ಪುರಾತನ ಗ್ರೀಕ್, ಈಜಿಪ್ಟ್   ಮತ್ತಿತರ ರಾಷ್ಟ್ರಗಳ ತತ್ವಜ್ಞಾನಿಗಳು ಕೂಡ  ಇದರ ಬಗ್ಗೆ  ಪ್ರತಿಪಾದಿಸಿದ್ದಾರೆ .

ಪಂಚಭೂತಗಳು ವಿಷ್ಣುವಿನಿಂದ ಜನಿಸಿದವು  ಎಂದು ಪುರಾಣಗಳು ಹೇಳುತ್ತವೆ . ಹಿಂದೊಮ್ಮೆ , ವಿಷ್ಣು , ಶಿವನನ್ನು ಕುರಿತು  ತಪಸನ್ನು ಆಚರಿಸುತ್ತಿದ್ದ, ಶಿವನ ಆಶಿರ್ವಾದದಿಂದ ಅನೇಕ  ಪರ್ವತ ಶಿಕರ , ಜರಿ , ನದಿ ತೊರೆಗಳು , ವಿಷ್ಣುವಿನ ದೇಹದಿಂದ  ಜನ್ಮ ತಾಳಿದವು . ನಂತರೆ ವಿಷ್ಣುವಿನ ದೇಹದಿಂದ, ಮೂರು ಗುಣಗಳು , ಪಂಚಭೂತಗಳು, ಕೊನೆಯಲ್ಲಿ ಪಂಚ ಜ್ಞಾನೇಂದ್ರಿಯ ಗಳು ಪ್ರಕಟವಾದವು . ಆತ್ಮನಿಂದ  ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಬೆಂಕಿ, ಬೆಂಕಿಯಿಂದ ನೀರು ಮತ್ತು ಎಲ್ಲ ೪ ಧಾತುಗಳಿಂದ ಭೂಮಿಯಾ ಸೃಷ್ಟಿಯಾಯಿತು . ವೇದಾಂತ ಪುರಾಣಗಳ  ಪ್ರಕಾರ , ಮನಷ್ಯನ ಪಂಚೇಂದ್ರಿಯಗಳು ಪಂಚಭೂತಗಳಿಂದ ಆವಿಷ್ಕರವಾಯಿತು .  ಆಕಾಶದಿಂದ ಕಿವಿ , ವಾಯುವಿನಿಂದ  ಚರ್ಮ, ಅಗ್ನಿಯಿಂದ ಕಣ್ಣು, ನೀರಿನಿಂದ ನಾಲಿಗೆ ಮತ್ತು ಭೂಮಿಯಿಂದ ನಾಸಿಕ ಹೊರಹೊಮ್ಮಿತು

ಪುರಾಣಗಳು , ಉಪನಿಷತ್ತುಗಳ ಜೊತೆ , ಆಯುರ್ವೇದ ಕೂಡ ಪಂಚ ಭೂತಗಳ ಮಹತ್ವವನ್ನು ಹೇಳುತ್ತದೆ .ಇದರ ಪ್ರಕಾರ , ಮನುಷ್ಯನಮರಣಾನಂತರ ಅವನ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ. ಇದು ಪ್ರಕೃತಿಯ ಸಮತೋಲನದ ಗುಟ್ಟು . ಆಯುರ್ವೇದದ ಪ್ರಕಾರ  ಮನುಷ್ಯನ ಆರೋಗ್ಯ ಕೂಡ ಪಂಚಭೂತಗಳಿಂದ ನಿಯಂತ್ರಿಸಲ್ಪಡುತ್ತದೆ . ದೇಹದ ಯಾವುದೇ ರೀತಿಯ ಅಸ್ವಸ್ಥೆ ಗೆ , ಪಂಚಭೂತಗಳ ಅಸಮತೊಲನವೆ ಕಾರಣ. ಆಯುರ್ವೇದದಲ್ಲಿ ಹೇಳುವ ವಾತ ಪಿತ್ತ , ಕಫ ದೋಷಗಳು , ಪಂಚಭೂತಗಳ ಪ್ರಾತಿನಿದ್ಯ .ಇನ್ನು ಪ್ರಾಚಿನ ಹಸ್ತ  ಮುದ್ರ ಕೂಡ ಪಂಚಭೂತಗಳ ಸಿದ್ಧಾಂತದಿಂದ ಆದ  ಜ್ಞಾನ . ಹಸ್ತ ಮುದ್ರಿಕೆಯ ಪ್ರಕಾರ ಹೆಬ್ಬೆರಳು ಅಗ್ನಿಯನ್ನು , ತೋರುಬೆರಳು ವಾಯುವನ್ನು, ಮದ್ಯಬೆರಳು ಆಕಾಶವನ್ನು ,ಉಂಗುರ ಬೆರಳು ಪ್ರುಥ್ವಿಯನ್ನು ಮತ್ತು ಕಿರು ಬೆರಳು ನೀರನ್ನು ಪ್ರತಿನಿದುಸುತ್ತದೆ

ದಕ್ಷಿಣ ಭಾರತದಲ್ಲಿ , ಪಂಚಭೂತಸ್ಥಳಂ ಎಂದು ಕರೆಯಲ್ಪಡುವ ಶಿವನ  ೫ ಬೇರೆ ಬೇರೆ ದೇವಸ್ಥಾನಗಳಿವೆ . ಈ ೫ ದೇವಸ್ಥಾನಗಳು ಪಂಚಬೂತಗಳನ್ನು  ಪ್ರಥಿನಿದಿಸುತ್ತವೆ. ಕಂಚಿಪುರಂನ ಎಕಾಮ್ಬರೆಶ್ವರ ದೇವಸ್ಥಾನ , ತ್ರಿಚಿಯ ಜಂಬುಕೇಶ್ವರ, ತಿರುವನಮಲೈ ನ ಅರುಣಾಚಲೇಶ್ವರ, ಕಳಹಸ್ತಿಯ ಶ್ರೀ ಕಾಳಹಸ್ಥೆಶ್ವರ ಮತ್ತು ಚಿದಂಬರಂನ ತಿಳ್ಳಿನಟರಾಜ ದೇವಸ್ಥಾನ .

ನಮ್ಮ ದೇಹದಂತೆ ಮನ್ಸಸ್ಸು ಕೂಡ ಪಂಚಭೂತಗಳ ಅತಿ ಸೂಕ್ಧ್ಮ ರೂಪದಿಂದ  ಆದದ್ದು . ಹಾಗಾಗಿ ಯಾವ ಪಂಚಭೂತ ಪ್ರಧಾನವಾಗಿರತ್ತೊದೋ ,ಮನುಷ್ಯನು ಅದೇ ರೀತಿಯ ವಿವಿದ ಮನಸ್ಥಿತಿ ಮತ್ತು ಭಾವಪರವಶತೆ ಯನ್ನು ಅನುಭವಿಸುತ್ತಾನೆ . ಉಧಾಹರಣೆಗೆ ಹೇಳುವುದಾದರೆ , ಪ್ರುಥ್ವಿಯು  ಪ್ರಬಲವಾದಾಗ ಆರಾಮದ ಅಥವ ಅಸ್ವಸ್ಥೆಯ , ಮತ್ತು ಮನಸೀನ ಭಾರವಾದ ಸ್ತಿತಿ, ಅದೇ ರೀತಿ ವಿಹರಿಸುತ್ತಿರುವ, ತೇಲುತಿರುವ ಮನಸಲ್ಲಿ  ನೀರಿನ  ,ಮುಂದೆ ನಡೆಯುವ ಅಥವ  ಸನ್ನಿವೇಶಗಳಿಂದ ಓಡಿ ಹೋಗಬೇಕು ಎಂದೆನಿಸುವ ಸಮಯಗಳ್ಳಲ್ಲಿ ಗಾಳಿಯಾ  , ಸಾಧಿಸುವ ಛಲ ,ರೋಷ , ಬೆಂಕಿಯ , ಮತ್ತು ಪೂರ್ಣತೆಯ ,ಹಗುರತೆಯ  ನಮ್ಮನ್ನು  ಸುತ್ತುವರೆದಾಗ ಮನಸ್ಸು ಆಕಾಶದ ಅಧೀನದಲ್ಲಿರುತ್ತದೆ . ಪಂಚಬೂತಗಳು   ನೇರವಾಗಿ ನಮ್ಮ ಮನಸನ್ನು ನಿಯಂತ್ರಿಸುತ್ತವೆ ಹಾಗಾಗಿ ಜ್ಞಾನಿಗಳು , ಋಷಿಮುನಿಗಳು ಮೂಲವಸ್ತುಗಳ ನಿಗ್ರಹಕ್ಕೆ , ಹತೋಟಿಗೆ ಯೋಗ ಧ್ಯಾನ ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು . ಯೋಗದ ಅಂತಿಮ,ಕಟ್ಟ ಕಡೆಯ ಉದ್ದೇಶ ಬೂತಶುದ್ದಿ - ಅಂದರೆ ಪಂಚಭೂತಗಳನ್ನು ಚೊಕ್ಕಟಗೊಲಿಸುವ  ಕೆಲಸ .ಹಾಗಾಗಿ ಶಾಂತಿ , ಸಮ್ರುದ್ದಿ ಮತ್ತು ಚಿರಂತನವಾದ ನೆಮ್ಮದಿಯ ಜೀವನ ನಮ್ಮದಾಗಬೇಕಾದರೆ ಪಂಚಬೂತಗಳ ಪ್ರಾಮುಖ್ಯತೆ ಹಾಗು ಅದರ ಮಾರ್ಮಿಕ ಫಲ ಪರಿಣಾಮಗಳ ಬಗೆಗಿನ ತಿಳುವಿಕೆ ತುಂಬ ಮುಖ್ಯ .




ಶನಿವಾರ, ಜುಲೈ 25, 2015

Thriguna

 ಮನುಷ್ಯನ  ದೇಹ ಪಂಚಭೂತಗಳಿಂದಾದ್ದು . ಮನುಷ್ಯನ ಮನಸ್ಸು ಗುಣಗಳಿಂದ ನಿಯಂತ್ರಿಸಲ್ಪಡುತ್ತದೆ . ಮಾನವನ  ಶಕ್ತಿ ಮೂರು ಗುಣಗಳಲ್ಲಿ ಹಂಚಿಹೊಗಿವೆ .ತಮಸ್ಸು , ರಜಸ್ಸು ಮತ್ತು ಸಾತ್ವಿಕ ಎಂಬುದೇ ಈ ಮೂರು ಗುಣಧರ್ಮಗಳು .  ಹಿಂದೂ ಸಂಸ್ಕೃತಿಯ  ದೇವರುಗಳಾದ , ,ಬ್ರಹ್ಮ ,ವಿಷ್ಣು ,ಮಹೇಶ್ವರರು  ವಿಭಿನ್ನ ಗುಣಗಳ ಸ್ವರೂಪ . ಬ್ರಹ್ಮನು  ರಜೋ ಗುಣದ ವಿಷ್ಣು ಸಾತ್ವಿಕ ಗುಣದ ಮತ್ತು ಶಿವನು ಎಲ್ಲ ಗುಣಗಳ ಪ್ರತಿರೂಪ . ವ್ಯಕ್ತಿಯ ವ್ಯಕ್ತಿತ್ವದ ಮೇಲೆ  ಈ ಮೂರು ಗುಣಗಳು ಪ್ರಭಾವ ಬೀರುತ್ತವೆ . ತಮೋ ಗುಣ ಜಡತ್ವದ , ರಜೋ ಗುಣ ಶಕ್ತಿ, ತೀವ್ರತೆಯಾ ಹಾಗು ಸಾತ್ವಿಕ ಗುಣ ಬೆಳಕಿನ , ಪರಿಶುದ್ದತೆಯ ಸಂಕೇತ .ಭೂಮಿಯ ಮೇಲಿರುವ ಎಲ್ಲ ವಸ್ತುಗಳು ,ಜೀವಿಗಳನ್ನು ಈ ಮೂರು ಗುಣದ ಆದರದ ಮೇಲೆಯೂ ವಿಂಗಡಿಸಬಹುದು

ಅಂಧಕಾರ ಕತ್ತಲೆಯ ಪ್ರತಿರೂಪವಾದ ತಮಸ್ಸು ಮಾಯೆ,ಉದಾಸೀನತೆ , ವಿನಾಶ, ಸಾವು, ಜಡತ್ವ, ಆಲಸ್ಯವನ್ನು ಪ್ರೋತ್ಸಾಹಿಸುವ ಶಕ್ತಿ .  ಪ್ರಪಂಚದ ಸೃಷ್ಟಿಯಲ್ಲಿ ತಮಸ್ಸು ರಾಕ್ಷಸೀ ಗುಣ .  ರಾಕ್ಷಸರಲ್ಲಿ ಮನೆಮಾಡಿರುವ ಗುಣ . ತಮೋಗುಣ ಹೆಚ್ಚಾದಂತೆಲ್ಲ ಮನುಷ್ಯ ತನ್ನ ದಿನಗಳ ಹೆಚ್ಚಿನ ಸಮಯ ನಿದ್ದೆ ಯಲ್ಲಿ ಕಳೆಯುತ್ತಾನೆ , ಕೆಲಸದ ಮೇಲಿನ ಅವನ ಶ್ರದ್ದೆ ,  ಆಸಕ್ತಿ ಕಡಿಮೆ ಆಗುತ್ತದೆ . ಈ ರೀತಿಯ ಅನುಭುವ ಪ್ರತಿಯೊಬ್ಬರಿಗೆ ಕೆಲವೊಮ್ಮೆ , ಕೆಲವೊಂದು ದಿನ ಆಗಬಹುದು . ಆದರೆ ಈ ಆಲಸ್ಯ ಪ್ರತಿದಿನದ ಮಾತಾಗುವುದು  ಒಳ್ಳೆಯ ಲಕ್ಷಣವಲ್ಲ . ಹೆಚ್ಚಿನ ತಾಮಸಕ್ಕೆ ಶರಣಾದ ವ್ಯಕ್ತಿ , ತನ್ನ ಕೆಲಸಗಳನ್ನು ಪ್ರತಿ ದಿನ ಮುಂದೂಡುತ್ತಾ ಬರುತ್ತಾನೆ ಇದರಿಂದ ಅಪಜಯ ಅವನದಾಗುತ್ತದೆ , ಖಿನ್ನತೆಗೆ ಒಳಗಾಗುತ್ತಾನೆ , ತನ್ನನ್ನು ತಾನೆ ಹಳಿಯುತ್ತಾ ಆತ್ಮಹತ್ಯೆಗೆ ಶರಣಾಗುತ್ತಾನೆ .  ಅರಿವಿಗೆ ಬರದಂತೆಯೇ , ತಮೋಗುಣ ಅವನ ಸುಂದರ ಜೀವನವನ್ನು ಕಬಳಿಸುತ್ತದೆ . ಎಲ್ಲೆ ಮೀರಿದ ,ತಮೋ ಗುಣವನ್ನು ಯಾವುದೇ  ಆಯುಧದಿಂದ ದಂಡಿಸಲು ಸಾಧ್ಯವಿಲ್ಲ , ಇದರ ನಿಗ್ರಹಕ್ಕೆ ಇರುವ ಒಂದೇ ಮಾರ್ಗ ಸುಪ್ತವಾಗಿರುವ ಸಾತ್ವಿಕ ಗುಣವನ್ನು ಹೆಚ್ಚಿಸಿಕೊಳ್ಳುವುದು .

 ಇನ್ನು ಚುರುಕುತನದ ಪ್ರತೀಕವಾದ ರಜೋ ಗುಣ ಉಳಿದೆರಡು ಗುಣಗಳನ್ನು ಬೆಂಬಲಿಸುವನ್ತದ್ದು . ಅತಿ ಹೆಚ್ಚು  ಚುರುಕುತನ,ಉತ್ಸುಕತೆ ಮತ್ತು ಭಾವೋದ್ವೇಗ ರಜೋ ಗುಣದ ಮುಖ್ಯ ಲಕ್ಷಣಗಳು . ರಜೋ ಗುಣ ತಮಸ್ಸಿಗಿಂತ ಧನಾತಮ್ಕ  ಸಾತ್ವಿಕಕಿಂತ ಋಣಾತ್ಮಕ . ನಾವು ನೋಡಿರಬಹುದು ಕೆಲವು ವ್ಯಕ್ತಿಗಳು , ಒಂದು ಕ್ಷಣಕ್ಕಾದರೂ ಒಂದು ಕಡೆ ಸ್ಥಿರವಾಗಿ ನಿಲ್ಲಲಾರರು , ಅವರ  ಮನಸ್ಸು ಯಾವಾಗಲು , ನೂರಾರು ಯೋಚನೆ, ಯೋಜನೆ, ಆಲೋಚನೆಗಳ ಮಳೆಯಲ್ಲಿ ತೊಳಲಾಡುತಿರುತ್ತದೆ .ಇದು ಇನ್ನು ಮಿತಿಮೀರಿ  ಗೊಂದಲಕ್ಕೆ ಒಳಗಾಗುತ್ತಾರೆ . ಮನದೊಳಗಿನ ಗೊಂದಲಗಳು ,ಮುಂಗೊಪಿತನ ,ಆಕ್ರಮಣ ರೂಪತಾಳಿ, ಕ್ರೌರ್ಯಕ್ಕೆ ತಿರುಗತ್ತದೆ . ಜೀವನದಲ್ಲಿ ಎಲ್ಲವನ್ನು ಸಾಧಿಸುವ ಶಕ್ತಿ ಇವರುಗಳಿಗೆ ಇದ್ದರು ಮಿತಿಮೀರಿದ  ರಜೋ ಗುಣದ ಪ್ರಭಾವದಿಂದ ಜೀವನ ವ್ಯರ್ಥವಾಗುತ್ತದೆ .

 ಅಪರೂಪವಾದ ಗುಣ , ಸತ್ವ ಗುಣ.ಸತ್ವ ಗುಣದಿಂದ ಕೂಡಿದ ವಸ್ತು , ವ್ಯಕ್ತಿ ತನ್ನ ಬಾಹ್ಯ ಮತ್ತು ಅಂತರಿಕ ಜಗತ್ತನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾನೆ  . ಸಾತ್ವಿಕತೆಯನ್ನು ಮೈಗೂದಿಡಿಕೊಂಡ ವ್ಯಕ್ತಿ ತನ್ನ ಸುತ್ತಮುತ್ತಲಿನ, ಜನ , ಪರಿಸರವನ್ನು ಸದಾ, ಒಳ್ಳೆಯ ರೀತಿಯಲ್ಲಿ ಕಾಣುತ್ತಾನೆ .  ಹೂವು , ಹಣ್ಣು , ದೇವರಿಗೆ  ಸಮರ್ಪಿಸುವ ನೈವೇದ್ಯ ಎಲ್ಲ ಸಾತ್ವಿಕತೆಯ ರೂಪಗಳು  . ಒಂದು ಸುಂದರವಾದ , ಹೂವನ್ನು   ಕಂಡಾಗ ನಮ್ಮ  ಮನಸಿನಲ್ಲಿ ಉಂಟಾಗುಗುವ ಆಹ್ಲಾದತೆಯ ಅನುಭವವೇ ಸಾತ್ವಿಕ ಗುಣ. ಸಾತ್ವಿಕ ಮನಸ್ಸು ಸದಾ ಪ್ರಶಾಂತ , ಸ್ಥಿರ ,ಸುಖಪ್ರದ .ಸಾತ್ವಿಕ ವ್ಯಕ್ತಿಗಳು ಸದಾ ಪ್ರಪಂಚದ , ಒಳಿತಿಗಾಗಿ ಚಿಂತಿಸುವವರು , ಅದಕ್ಕಾಗಿ ದುಡಿಯವವರು, .  ಅವರ ಆಹಾರ,ಉಡುಗೆ ತೊಡುಗೆ ಮಾತು ಎಲ್ಲ ಹಿತ ಮಿತವಾದದ್ದು . ವಿಚಾರ ಮೆಲುಸ್ತರದ್ದು . ತುಳಸಿದಾಸರು, ತ್ಯಾಗರಾಜರು, ರಮಣ  ಮಹರ್ಷಿಗಳು, ಪರಮಹಂಸರು, ಸ್ವಾಮಿ ವಿವೇಕಾನಂದರು ಇವರೆಲ್ಲ ಸಾತ್ವಿಕ ಗುಣಕ್ಕೆ ಇನ್ನೊಂದು ಹೆಸರು . ಎಲ್ಲದರಲ್ಲೂ ಸುಂದರತೆಯನ್ನು,ಸತ್ಯತೆಯನ್ನು ಕಾಣುವ, ಕಿಚ್ಚು ದ್ವೇಷ ,ಅಸೂಯೆಗಳಿಂದ ವಿಚಲಿತರಾಗದವರೆ ಸಾತ್ವಿಕ ಪುರುಷರು .

ಮೂರು ಗುಣಗಳಲ್ಲಿ ಒಂದು ಗುಣವನ್ನು ಒಳ್ಳೆಯದು,ಇನ್ನೊಂದನ್ನು ಕೆಟ್ಟದ್ದು ಎಂದು ವಿಂಗಡಿಸಿ ಭೆರ್ಪಡಿಸಲು ಸಾಧ್ಯವಿಲ್ಲ . ತಮಸ್ಸು ಇಲದೆ ನಿದ್ರೆ ಇಲ್ಲ , ರಜಸ್ಸು ಇಲ್ಲದೆ ಚಟುವಟಿಕೆ ಇಲ್ಲ.ಸಾತ್ವಿಕ ಗುಣ ಮೆಲುಸ್ತರದ್ದು , ಅದನ್ನು ಹೆಚ್ಚಿಸಿ, ಉಳಿದೆರಡು  ಗುಣಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು .ಸಾತ್ವಿಕತೆ ಹೆಚ್ಚಿ,ತಮೋ ರಜೋ ಗುಣಗಳು ಸಮತೊಲನದಲ್ಲಿದ್ದಾಗ, ಮನಸ್ಸು ಪ್ರಫುಲ್ಲ, ಸ್ಥಿರ. ಆತ್ಮ ಆಹ್ಲಾದಮಯ ,ಜೀವನ ಸಾರ್ಥಕ .




ಗುರುವಾರ, ಜುಲೈ 23, 2015

yoga

ಜೂನ್ ೨೧, ೨೦೧೫ ರಂದು ಅಂತರಾಷ್ಟ್ರೀಯ ಯೋಗ ದಿನವನ್ನು  ಆಚರಿಸಲಾಯಿತು . ೧೯೨ ರಾಷ್ಟ್ರಗಳು ಯೋಗಾಸನದ ಅಭ್ಯಾಸದಲ್ಲಿ ಭಾಗವಿಸಿದ್ದವು . ೫೦೦೦ ವರ್ಷಗಳಷ್ಟು  ಹಿಂದೆ ಭಾರತದಲ್ಲಿ ಉಗಮವಾದ ಯೋಗದ ಏಕೈಕ ಗುರಿ ಆತ್ಮ ಮತ್ತು ಪರಮಾತ್ಮನ ಮಿಲನದ ಅನುಭವ . ಯೋಗ ಮನುಷ್ಯನ ಮಾನಸಿಕ ,ಭೌದ್ಧಿಕ ಮತ್ತು ಆದ್ಯಾತ್ಮಿಕ ಅಭ್ಯಾಸ .  ಜೂನ್ ೨೧ನ್ನೇ ಯೋಗ ದಿನವೆಂದು ಗುರಿತುಸುವುದರ ಹಿಂದೆ ಅನೇಕ ಕಾರಣಗಳಿವೆ  . ಭೂಮಿಯ ಉತ್ತರಾರ್ಧ ಗೋಳದ ಅತ್ಯಂತ ಧೀರ್ಘವಾದ ದಿನ,ದಕ್ಷಿಣಾಯಣ ಸಂಧಿ ಕಾಲ . ಜಗದ ಆದಿಗುರು, ಆದಿಯೋಗಿ ಶಿವನು ದಿನ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದನೆಮ್ಬುದು ಇನ್ನೊಂದು ನಂಬಿಕೆ 

ಯೋಗದ ಹುಟ್ಟು ಎಂದು , ಯಾರಿದರ ಕರ್ತ್ರು ಎಂಬುದರ ಬಗ್ಗೆ ಯಾವುದೇ ನಿಖರ ಮಹಿತಿಗಳಿಲ್ಲ . ಇತಿಹಾಸ ಕಾರರ ಪ್ರಕಾರ ಇದು ವೇದ ಕಾಲಕಿಂತಲೂ ಹಳೆಯದು .ಈಗ ಪ್ರಚಲಿತದಲ್ಲಿರುವ ಪತಂಜಲಿ ಯೋಗ ತೀರೇ ಇತ್ತೀಚಿನದು . ಇದು ೧ ನೆ ಶತಮಾನಕ್ಕೆ ಸೇರಿದ ಗ್ರಂಥ .  ಕೇವಲ  ನಮ್ಮ ದೇಶಕ್ಕೆ ಸೀಮಿತವಾಗಿದ್ದ ಯೋಗಬ್ಯಾಸವನ್ನು ವಿಶ್ವಕ್ಕೆ ಪರಿಚಯಿಸಿದ  ಮೊದಲ ಭಾರತಿಯ ಸ್ವಾಮಿ ವಿವೇಕಾನಂದರು  .ಇವರ ನಂತರ ಅನೇಕ ಆಧ್ಯಾತ್ಮಿಕ ಗುರುಗಳು , ಯೋಗಿಗಳು ಈ ಪರಂಪರೆಯನ್ನು  ಮುಂದುವರೆಸುತ್ತಿದ್ದಾರೆ . ೧೯  ನೆ ಶತಮಾನದಲ್ಲಿ ಕೇವಲ ದೈಹಿಕ ವ್ಯಾಯಾಮವಾಗಿ ವಿಶ್ವದೆಲ್ಲೆಡೆ ಪ್ರಸ್ಸಿದಿಯಾದ ಯೋಗ ಭಾರತದಲ್ಲಿ ಮಾತ್ರ ಕೇವಲ ವ್ಯಾಯಮವಲ್ಲ . ಅದು  ಧ್ಯಾನ ಮತ್ತು ಆಧ್ಯಾತ್ಮಿಕತೆಯ ಸತ್ಹ್ವಾಂಶ . 

ವೇದಗಳು ಹಳೆಯದಾಯಿತು ,ಉಪನಿಷತ್ತು ಮತ್ತು ಗ್ರಂಥಗಳ  ಬಳಕೆ ಕಡಿಮೆ ಆಯಿತು .  ಹೊಸ ನೀರು ಬಂದು ಹಳೆ ನೀರು ಕೊಚ್ಚಿ ಹೋಗುವಂತೆ ಕಾಲದೊಂದಿಗೆ ಭಾರತದಲ್ಲಿ ಹುಟ್ಟಿದ ಕಲೆ-ಸಂಸ್ಕೃತಿ ,ಆಚರ -ವಿಚಾರ , ಸಂಪ್ರದಾಯ , ಕಟ್ಟಲೆಗಳು ಮೂಲೆಗುಂಪಾದವು  ಪುರಾತನ ನಂಬಿಕೆಗಳನ್ನು ,  ಪ್ರಯೋಜನಕ್ಕೆ ಬಾರದ ವಿಷಗಳು ಎಂದು  ಮೂಗು ಮುರಿಯುವ ಯುವಜನ , ಯೋಗಬ್ಯಾಸವನ್ನು ಮಾತ್ರ ನಂಬುತ್ತಾರೆ,ಗೌರ್ರವಿಸುತ್ತರೆ , ಅನುಸರಿಸುತ್ತಾರೆ  . ಇಷ್ಟು ವರ್ಷ ಕಳೆದರು ಯೋಗ ಇಂದಿಗೂ ಪ್ರಸ್ತುತ 

ಆರೋಗ್ಯವೇ ಭಾಗ್ಯ . ಯೋಗ ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ  ಅವಶ್ಯಕ .  ಪ್ರತಿಯೊಬ್ಬ ಮನುಷ್ಯನಿಗೂ  ತನ್ನ ಜೀವನದ ಪ್ರತಿ ಘಟ್ಟದಲ್ಲೂ ಯೋಗ  ಸಹಾಯಕ್ಕೆ ಬರುತ್ತದೆ  ಯೋಗಭ್ಯಾಸದಲ್ಲಿ ತೊಡಗಿಸಿಕೊಂಡ ವ್ಯಕ್ತಿಗೆ  , ಶಿಸ್ತು  ಸಂಯಮ,ಆರೋಗ್ಯ,  ಸ್ಥಿರ ಮನಸ್ಸು , ಚುರುಕಾದ ಬುದ್ಧಿ ತಾನಾಗಿಯೇ ಬರುತ್ತದೆ . ಹೃದ್ರೋಗ,ಅಸ್ತಮಾ ಕ್ಯಾನ್ಸರ್ ಮುಂತಾದ ಖಾಯಿಲೆಗಳ ನಿಗ್ರಹಕ್ಕೆ ಯೋಗ ಪರಿಣಾಮಕಾರಿ . ಪ್ರಾಣಯಾಮ , ಧ್ಯಾನ ಮತ್ತು ಯೋಗದ ಅಭ್ಯಾಸದಿಂದ ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲಾಗುವ ಅಥ್ಯದ್ಭುಥ ಪರಿಣಾಮಗಳನ್ನು ವೈದ್ಯರು , ಮನೋವಿಜ್ಞಾನಿಗಳು ಕೂಡ ಪುಷ್ಟಿಕರಿಸುತ್ತಾರೆ. ವಿಧ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು , ಯುವಕರಲ್ಲಿ ಮಾನಸಿಕ ಸ್ಥಿರತೆಯನ್ನು , ವಯಸ್ಕರಲ್ಲಿ ಸಾಧಿಸುವ ಛಲ ಮತ್ತು ತಾಳ್ಮೆಯನ್ನು  ಹಾಗು ವೃದ್ದಾಪ್ಯದಲ್ಲಿ ಅತ್ಯಂತ ಅವಶ್ಯಕವಾದ ಮಾನಸಿಕ ನೆಮ್ಮದಿ ಮತ್ತು ಆರೋಗ್ಯವನ್ನು ಯೋಗ ನೀಡುತ್ತದೆ . 

ಇಷ್ಟೆಲ್ಲಾ  ಪ್ರಯೋಜನಕಾರಿಯಾದ ಯೋಗಾಭ್ಯಾಸ ಪ್ರತಿಯೊಬ್ಬರ ಜೀವನದಲ್ಲಿ ದಿನಚರಿಯಾಗಿ ಇರದಿರುವುದು ವಿಷಾದಕರ.ಕೇವಲ ಖಾಯಿಲೆ ಬಂದಾಗ, ಖಿನ್ನತೆ ಗೆ ಒಳಗಾದಾಗ , ಸ್ಥೂಳಕಾಯರಾದಾಗ , ವೈದ್ಯರ ಸಲಹೆಯಾ ಮೇರೆಗೆ ಯೋಗಾಸನದ ಕಡೆಗೆ ಮುಖ ಮಾಡುವವರು ಅದನ್ನು ದಿನಚರಿಯ ಭಾಗವಾಗಿ ಅಭ್ಯಸಿಸಬೇಕು , ಅನುಸರಿಸಬೇಕು . ಯೋಗದ   ಮಹತ್ವ ವನ್ನು  ಅರಿತ ಅದೆಷ್ಟೋ ಬಹುದೆಶಿಯ ಕಂಪನಿ ಗಳು ತಮ್ಮಲ್ಲಿ  ಕೆಲಸ ಮಾಡುವ ಉದ್ಯೋಗಿಗಳಿಗೆ , ಆಗಿನ್ದಾಗೆ ಯೋಗಾಭ್ಯಾಸದ ಕಾರ್ಯಾಗಾರಗಳನ್ನು ,ತರಗತಿಗಳನ್ನು ನಡೆಸುತ್ತದೆ. ಇದರ ಹಿಂದಿರುವ ಉತ್ತಮ , ಉದ್ದೇಶ ನೌಕರರ ದೈಹಿಕ,ಮಾನಸಿಕ ,ಆರೋಗ್ಯ ವೃದ್ದಿ ಅದರಿಂದ ಹೆಚ್ಚುವ ಕಾರ್ಯ ಕ್ಷಮತೆ .ಇದನ್ನು ನಮ್ಮ ಸರ್ಕಾರಿ ಕಛೇರಿಗಳಲ್ಲಿ , ಶಾಲಾ ಕಾಲೆಗುಗಳಲ್ಲಿ ರೂಡಿಸಿಕೊಳ್ಳಬೇಕು  .ಹಳ್ಳಿಯ ಜನ ಶ್ರಮಿಕರು ,  ಪಟ್ಟಣ ದ ಜನರ ಜೀವನ ಶೈಲಿಗೆ ಮಾತ್ರ ಯೋಗದ ಅವಶ್ಯಕತೆ ಇದೆ ಎಂದು ವಾದಿಸುವುದು ಅವೈಜಾನಿಕ . ಕೇವಲ ಕೆಲವು ವಯಸ್ಸಿನ , ಧರ್ಮದ, ಜಾತಿಯ, ಜನಾಂಗದ , ಪ್ರದೇಶದ ಜನರಿಗೆ ಮಾತ್ರ ಯೋಗದ ಅವಶ್ಯಕತೆ ಇದೆ ಎಂಬುದು ತಪ್ಪು ಕಲ್ಪನೆ .ಮಾನಸಿಕ ದೈಹಿಕ ಆರೋಗ್ಯ ಪ್ರತಿಯೊಬ್ಬರ ಹಕ್ಕು,ಅದನ್ನು ಕಾಪಾಡಿ ಕೊಳ್ಳುವುದು ನಮೆಲ್ಲರ ಕರ್ತವ್ಯ .  
ಯೋಗ ಕೇವಲ ಒಂದು ದಿನದ ಅಬ್ಯಾಸವಲ್ಲ , ಪ್ರತಿನಿತ್ಯ ಮಾಡುವುದೇ ಯೋಗಬ್ಯಾಸ . ಯೋಗ ನಮ್ಮ ಹಿರಿಯರು, ಯೋಗಿಗಳು ,ಚಿಂತಕರು, ತತ್ವಜ್ಞಾನಿಗಳ ನಮಗಾಗಿ ಬಿಟ್ಟು ಹೋಗಿರುವ ಪರಂಪರೆ. ಅದನ್ನು ನಮ್ಮ ದಿನನಿತ್ಯದ ಜೀವನದಲ್ಲಿ ರೂಡಿಸಿಕೊಳ್ಳುವುದರ ಬಗ್ಗೆ ಚಿಂತನೆ ನಡೆಸೋಣ . 

ಗುರುವಾರ, ಅಕ್ಟೋಬರ್ 3, 2013

Ammana habba

ಈ ವಾರಂತ್ಯ ಕುಶಾಲನಗರಕ್ಕೆ ಹೋಗಿ ಬರಬೇಕು ಎಂದು ಮೊದಲೇ ನಿರ್ದರಿಸಿದ್ದ ನಾನು, ಕಿರಣ್ ,ಆಫೀಸ್ ಗೆ ರಜೆ ಹಾಕಿ ಶುಕ್ರವಾರ ಬೆಳಗ್ಗೆ ೫ ಗಂಟೆಗೆ ಕಾರ್  ಸ್ಟಾರ್ಟ್ ಮಾಡಿಕೊಂಡು ಹೊರೆಟೆವು . ನಾನು ಎ ಸಲ ಊರಿಗೆ ಹೋಗಲು ಇನ್ನೊಂದು ಕಾರಣವು ಇತ್ತು - ಬನಶಂಕರಿ ಜಾತ್ರೆ ಅದಾಗಿತ್ತು (ಅಮ್ಮನ ಹಬ್ಬ ). ಸಣ್ಣವಳಿದ್ದಾಗ ಪ್ರತಿ ವರ್ಷ ನೋಡಿ ಆನಂದಿಸುತ್ತಿದ್ದ ಈ ಜಾತ್ರೆ ವೈಭವ ನಾನು ನೋಡ್ದೆ ಸುಮಾರು ೧೨ ವರ್ಷಗಳು ಕಳೆದಿರಬೇಕು. ಬೆಂಗಳೂರಿನಿಂದ ಕುಶಾಲನಗರದವರೆಗಿನ ೪ ಗಂಟೆ ಪ್ರಯಾಣ ಕಳೆಯಲು ನಾನು ಕಿರಣ್ ಗೆ  ಜಾತ್ರೆಯ ಮತ್ತು ಅದು ನಡೆಯುವ ಊರಿನ ಬಗ್ಗೆ ನನಗೆ ತಿಳಿದಷ್ತು ಹೇಳತೊಡಗಿದೆ .

ಕೊಡಗಿನ ಉತ್ತರಕ್ಕೆ ಇರುವ  ಒಂದು ಸಣ್ಣ ಹಳ್ಳಿ ಹೆಬ್ಬಾಲೆ . ನಾನು ಬೆಳೆದು  ಕಲಿತ ಊರು . ಈಗ ಅಲ್ಲಿ ನಾವು ವಾಸವಿಲ್ಲದೆ ೧೦-೧೫  ವರ್ಷಗಳು ಕಳೆದರು ಊರು ಎಂದಾಗ ಮೊದಲು ಮನಸ್ಸಿಗೆ  ಬರುವುದು ಇದೆ ಹಳ್ಳಿ . ಸುತ್ತಮುತ್ತಲ ಹಳ್ಳಿಗಳಿಗೆ ಹೋಲಿಸಿದರೆ ಅಂಚೆಕಚೇರಿ, ಪೋಲಿಸ್ ಸ್ಟೇಷನ್ ,  ಪ್ರೌಡ ಶಾಲೆ,  ಆಸ್ಪತ್ರೆ   ಹೀಗೆ ಇನ್ನು ಕೆಲವು ಮೂಲ ಸೌಲಭ್ಯಗಳು ಇದ್ದಿದ್ದು ಹೆಬ್ಬಾಲೆಯಲ್ಲಿ ಮಾತ್ರ. ಕೊಡಗು ಮತ್ತು  ಹಾಸನ ಜಿಲ್ಲೆಯ ಗಡಿಭಾಗವಾಗಿದ್ದ ಹೆಬ್ಬಾಲೆಯಲ್ಲಿ  ಇಲ್ಲವೆ ಇಲ್ಲ ಎನ್ನುವಷ್ಟು ಕಡಿಮೆ ಕೊಡವರು .  ಶಾಲೆಯ ಶಿಕ್ಷಕರಾಗಿಯೋ ಇಲ್ಲ ಆಸ್ಪತ್ರೆಯಾ ದಾದೀಯರಗಿಯೋ ಬಂದಾ ಒಂದೆರಡು ಕುಟುಂಬಗಳು ಇದ್ದವು. ಅಲ್ಲದೆ ಬೇರೆ ಬೇರೆ ಜಾತಿಯ , ಪಂಗಡಗಳ ನೂರಾರು ಕುಟುಂಬಗಳು ಇದ್ದವು . ಭಾರತದ ಇತರ ಎಲ್ಲ ಹಳ್ಳಿಯಂತೆ ಕೃಷಿ ಪ್ರಧಾನವಗಿತ್ತು . ಕಾವೇರಿ ನದಿ ಹಳ್ಳಿಯ ಪಕ್ಕದಲ್ಲೇ ಹರಿಯುತಿದ್ದಳಾದರು ಯಾರಿಗೂ ಕೈಗೆ ಸಿಗುತಿರಲಿಲ್ಲ . ಕಾರಣ , ಊರ ಹೊರಗಿನ ಹೊಲಗಳ ,ಮತ್ತು ಸಣ್ಣ ಕಾಡಿನ ಹಾದಿಯನ್ನು ದಾಟಿದ ಮೇಲೆ ಅದರ  ಹರಿವು ಕಾಣುತಿತ್ತು .ಆದರಿಂದ ಹಳ್ಳಿಯ ರೈತರು ಕೃಷಿಗೆ ನೀರಾವರಿಯನ್ನೇ ಅವಲಂಬಿಸಿದ್ದರು.

ಬನಶಂಕರಿ ಊರಿನ ಗ್ರಾಮ ದೇವತೆ . ಹೆಸರೇ ಹೇಳುವಂತೆ ಈ ದೇವರು ನೆಲೆಸಿದ್ದು ಬನ (ಸಣ್ಣ ಕಾಡು) ದಲ್ಲಿದ್ದ ಒಂದು ಸಣ್ಣ ಗುಡಿಯಲ್ಲಿ. ಅದೇ ನಮಗೆ ದೇವಸ್ತಾನ .ಕಾಡಿನ ಬಲ ಭಾಗದಲ್ಲಿ ಸಣ್ಣಗೆ ಹರಿಯುತಿದ್ದ ತೊರೆ , ಎಡ ಬಾಗದಲ್ಲಿ ದೊಡ್ಡ ಕಾಲುವೆಯ ಏರಿ . ಕಾಲುವೆಯ ಏರಿಯಾ ಮೇಲೆ  ಸ್ವಲ್ಪ ದೂರ ನಡೆದು ಹೋದರೆ ಹಳೆಕೋಟೆ ಎಂಬ ಇನ್ನೊಂದ್ ತೀರ ಸಣ್ಣ ಹಳ್ಳಿ .  ಇದೆ ಕಾಲುವೆ ಏರಿಯ ಇನ್ನೊಂದು ಬಾಗಕ್ಕೆ  ಸರಕಾರೀ ಶಾಲೆಯ ಆಟದ ಮೈದಾನ .  ಹಳೆಕೊಟೆಯ ಹಳ್ಳಿಯ ಮಕಳ್ಳೇಲ್ಲ ಹೆಬ್ಬಾಲೆಯ  ಶಾಲೆಗೇ ಬರುತಿದ್ದರು . ಅವರು ಬರುವಾಗ ಅ ಕಾಡಿನಲ್ಲಿ ಇದ್ದ ಹಲವರು , ನೆಲ್ಲಿಕಾಯಿ, ಮಾವು, ಸೀಬೆ ,ಹುಣಸೆ  ತಡಸಲ ಹಣ್ಣು , ಹೀಗೆ ಹಲವರು ಮತಿತ್ತರ ಹಣ್ಣು ಗಳ್ಳನ್ನು ಕಿತ್ತು ತರುತಿದ್ದರು .ಕೆಲವೊಮ್ಮೆ , ತಾವು ಬೂತ ದೆವ್ವ ಗಳನ್ನೂ ನೋಡಿದ , ಯಾರೋ ಹೆಂಗಸು ನಕ್ಕ , ಗೆಜ್ಜೆಯ ಶಬ್ದವಾದ  ಕತೆಗಳನ್ನು ತರುತಿದ್ದರು .  ಇದನೆಲ್ಲ ನಿಜವೆಂದು ನಂಬಿ ಹೆದರುತಿದ್ದ ನಾವು , ದೇವಸ್ತಾನವಿರಲಿ ಅದರ ಕಾಡಿನ ಬಳಿಯೂ ಹೋಗುತಿರಲಿಲ್ಲ. ಒಟ್ಟಿನಲ್ಲಿ ದೇವಸ್ತನವಗಿದ್ದರು , ದೆವ್ವಗ ಜಾಗವೆಮ್ಬಂತೆ ನಾವು ಹೆದರುತ್ತಿದೆವು . 

 ಪಾರ್ವತಿಯ ಇನ್ನೊದು ಅವತಾರವಾದ ಬನಶಂಕರಿಗೆ ವರುಷಕ್ಕೆ ಒಂದು ಬಾರಿ ಜಾತ್ರೆ ಉತ್ಸವ ಪೂಜೆ ಎಲ್ಲ . ಇನ್ನುಳಿದ ದಿನಗಳು ಬಾಗಿಲು ಮುಚ್ಚಿರುತಿತ್ತು . ಬನಶಂಕರಿಯಾ ಜಾತ್ರೆಯೆಂದರೆ ಹಳ್ಳಿಯವರಿಗೆಲ್ಲ  ದೊಡ್ಡ ಹಬ್ಬ . ನಾವು ಅದೇ ಹಳ್ಳಿಯವರಲ್ಲ ಎಂಬ ಕಾರಣಕ್ಕೆ ನನ್ನ ಅಮ್ಮ , ಹಬ್ಬವನ್ನು ಮೊದ್ಲು ಆಚಿರಿಸುತಿರಲಿಲ್ಲ .ಆದರೆ ನನ್ನ  ಅಜ್ಜಿ ಹಳಿಯಲ್ಲಿ , ಇರೋವರೆಗೂ ಅ ಗ್ರಾಮದ ದೇವತೆ ಹಬ್ಬ ವನ್ನು ಮಾಡಬೇಕು ಎಂದು ಅಮ್ಮನಿಗೆ ,ಹೇಳಿದ ಮೇಲೆ  ನಮ್ ಮನೆಯಲ್ಲೂ ಹಬ್ಬದ ಆಚರಣೆ ಶುರವಾಇಯ್ತು 

ಜಾತ್ರೆ ಹಬ್ಬ-ಹುಣ್ಣೀಮೆಗಳ ಆಚರಣೆ  ಸ್ಥಳದಿಂದ - ಸ್ಥಳಕ್ಕೆ ಭಿನ್ನವಾಗಿರುತ್ತದೆ . ಅದೇ ರೀತಿ ಬನಶಂಕರಿಯಾ ಜಾತ್ರೆ  ತನ್ನದೇ ರೀತಿಯಲ್ಲಿ ವಿಭಿನ್ನವಾಗಿತ್ತು .ತಿಥಿ , ನಕ್ಷತ್ರ ಇತ್ಯಾದಿಗಳು ನಂಗೆ ಗೊತಿಲ್ಲದಿದ್ದರು , ನವೆಂಬರ್ ಅತ್ವ ಡಿಸೆಂಬರ್ ಮಾಹೆಯ ಅಮಾವಸ್ಯೆಯ ದಿನ ಈ  ಹಬ್ಬ ನಡೆಯುತ್ತದ್ದೆ ಎಂದು ನಾನು ತಿಳಿದಿದ್ದೇನೆ . ಜಾತ್ರೆಯ ಒಂದು ತಿಂಗಳು ಮುಂಚೆಯೇ , ಕೆಲವು ಸಂಘಗಳು, ಇತರ ಊರಿನ ಹಿರಿಯರು , ಗ್ರಾಮ ಪಂಚಾಯಿತಿ ವತಿ ಇಂದ  ಮನೆಗೆ ಹೋಗಿ ಉತ್ಸವದ ಕರ್ಚಿಗೆ ಹಣ ಸಂಗ್ರಹಿಸುತ್ತಾರೆ . ಹಬ್ಬದ ಪ್ರಯುಕ್ತ , ಸುತ್ತ ಮುತ್ತಲಿನ ಶಾಲಾ ಮಕ್ಕಳಿಗೆ ವಿವಿದ ರೀತಿಯ , ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ದೆಗಳು ಒಂದು ವಾರ ಮುಂಚೆ  ಶುರುವಾಗುತಿದ್ದವು . ಎಲ್ಲ ಕರ್ಯಕ್ರಮ್ಗು ನಾನು ಓದುತಿದ್ದ ಪ್ರಾಥಮಿಕ ಶಾಲೆಯಲ್ಲೇ ,ಜರುಗುತಿದ್ದರಿಂದ  ನಮಗೆ ೧ ವಾರಗಳ ಕಾಲ ಪಾಟವೆ  ಇಲ್ಲ , ಬರಿ ಆಟ .ಹಬ್ಬದ ದಿನ ಮತ್ತು ಅದರ ಮಾರನೆ ದಿನ ಸುತ್ತ ಮುತ್ತಲಿನ ಎಲ್ಲ ಶಾಲಾ ಕಾಲೆಜುಗಳಿಗೆ ರಜೆ .ಮೊದಲೇ ಹೇಳಿದ ಹಾಗೆ ದೇವಸ್ತಾನ , ಸಣ್ಣ ಕಾಡಿನ ಮಧ್ಯೆ ಇತ್ತು . ಜಾತ್ರೆ ಎಂದ ಮೇಲೆ ಎಷ್ಟು ಜನ ಸೇರುತ್ತಾರೆ . ಎಷ್ಟು ಭಕ್ತಾದಿಗಳು ಬರುತ್ತಾರೆ . ಇವರೆಲ್ಲ ಬನದ  ದಾರಿ ನಡೆಯುವುದು ಸುಲಭವಾಗಲು "ಬನ ಶುಚಿಗೊಳಿಸುವ " ಕಾರ್ಯಕ್ರಮ ನಡೆಯುತ್ತಿತ್ತು. ಜಾತ್ರೆಯ ನಂತರ ಒಂದು ವರ್ಷಗಳ ಕಾಲ ದೇವಸ್ಥಾನದ ಬಳಿ ಯಾರು ಹೋಗುತ್ತಿರಲ್ಲಿಲ್ಲವದ್ದರಿಂದ ಅಲ್ಲಿ ಬೆಳೆಯುತ್ತಿದ್ದ ಗಿಡ ಮರ ಬಳ್ಳಿಗಳು ದೇವಸ್ತಾನ ಮತ್ತು ಹೋಗುವ ದಾರಿಯನ್ನು ಆಕ್ರಮಿಸಿಕೊಳ್ಳುತ್ತಿದ್ದವು .ಈ ಬೇಡದ ಗಿಡ ಬಳ್ಳಿ ಗಳ್ಳನ್ನು ಕಡಿದು ದಾರಿ ಸ್ವಚ್ಛ ಮಾಡುವುದೇ "ಬನ ಶುಚಿ" ಕೆಲಸ . ಈ ಕೆಲಸ ಜಾತ್ರೆ ಗೆ ಎರಡು ದಿನ ಮುಂಚೆ ಪ್ರತಿ ವರ್ಷ ನಡೆಯುತ್ತಿತ್ತು .ಈ ಶುಚಿಗೊಳಿಸುವ ಕೆಲಸದ ಜವಾಬ್ದಾರಿಶಾಲಾ ಮಕ್ಕಳದ್ದು . ಚಿಕ್ಕ್ಕ  ಚಿಕ್ಕ ಗಿಡ , ಮರ, ಪೊದೆ  ಬಳ್ಳಿಗಳನ್ನು ಕಡಿದು  ಮಣ್ಣು ಹಾಕಿ ನೆಲವನ್ನು ಸಮ ಮಾಡುವ ಕೆಲಸ  ಪ್ರಾಯಾಸದಾಗಿದ್ದರು ನಮಗೆ ತುಂಬಾ ಮೋಜು ಕೊಡುತ್ತಿತ್ತು . ಶಾಲೆಯ ಪಾಠಗಳಿನ್ದ ಬಿಡುಗಡೆ ಸಿಗುತಿತ್ತು  ಎಂಬ ಕಾರಣಕ್ಕೋ ಅಥವಾ ವರುಷ ಪೂರ್ತಿ ಭಯ ಪಡುತಿದ್ದ ಕಾಡಿಗೆ ಇಂದು  ಹೋಗುವಾ ಸಾಹಸ ಮಾದುತಿದ್ದೇವೆ ಎಂಬ ಕಾರಣಕ್ಕೋ ಗೊತ್ತಿಲ್ಲ .ನಮಗೆ ಕೆಲಸಗಳು ಸಹ  ನಮ್ಮ ವಯಸಿನ್ನ  ಹಾಗೆ ವಿಂಗಡಣೆ  ಆಗುತಿತ್ತು . ೭ ನೆ ತರಗತಿಯಾ ಮೆಲೆಇನ ದರ್ಜೆಯ ಗಂಡು ಮಕ್ಕಳಿಗೆ  , ದೊಡ್ಡ ಮರ ಗಿಡಗಳನ್ನು ಕಡಿಯುವ ಅವುಗಳನ್ನು ಒಟ್ಟು ಮಾಡುವ ಕೆಲಸ. ಸಣ್ಣ ಪ್ರಾಯದ ಪ್ರಾಥಮಿಕ ಶಾಲೆಯ  ಮಕ್ಕಳು , ಚಿಕ್ಕ್ಕ ಚಿಕ್ಕ ಗಿಡಗಳನ್ನು ಕಡಿದು  ನೆಲದ ಮೇಲೆ ಕುಳಿತು ಹುಲ್ಲು, ಕಳೆಗಳನ್ನು ಕಿತ್ತು ಮಣ್ಣು ಹದ ಮಾಡುತಿದ್ದರು . ಹೆಚ್ಚಿನ್ನ ಮಕ್ಕಳು ರೈತರ ಕುಟುಂಬದವರಾಗಿದ್ದರಿಂದ , ಎಲ್ಲರಿಗು ಕೈ ತೋಟ  , ಹೊಲ ಗದ್ದೆಗಲ್ಲಿ ಕೆಲಸ ಮಾಡಿ ಅಭ್ಯಾಸವಿದ್ದ ಕಾರಣ,ಒಂದೇ ದಿನದಲ್ಲಿ  ಮಕ್ಕಳೆಲ್ಲ  ಬನ  ಶುಚಿಗೊಳಿಸುವ ಕೆಲಸ ಮುಗಿಸುತ್ತಿದ್ದೆವು . ದಿನ ಮುಗಿಯುವುದರೊಳಗೆ . ಕಾಡಿನ ಪ್ರಾರಂಭದಿಂದ , ದೇವಸ್ಥಾನದ  ಬಾಗಿಲ ವರೆಗೂ ಸುಮಾರು  ೫ ಅಡಿ ಅಗಲದ ಕಾಲು ದಾರಿ  ಸಿದ್ದವಾಗುತಿತ್ತು . ಈ ದಾರಿಯು ಇನ್ನೇನು ದೇವಸ್ಥಾನವನ್ನು  ಮುಟ್ಟುವ ಮೊದಲು ಇನ್ನು ಸ್ವಲ್ಪ ಅಗಲವಾಗಿ , ಸುಮಾರು ೩೦ ಅಡಿ ವ್ಯಾಸದ  ವೃತ್ತಾಕಾರದ ಸ್ವರೂಪ ಪಡೆದು ಮತ್ತೆ ಸಣ್ಣ ದಾಗಿ ದೇವಸ್ತಾನ ಬಾಗಿಲು ಮುಟ್ಟುತಿತ್ತು . ನಾವೇ ಕಡಿದ , ಮರದ ದಿಮ್ಮಿಗಳ್ಳನ್ನು , ರೆಂಬೆ ಕೊಂಬೆ ಗಳೆನ್ನೆಲ್ಲ ಒಟ್ಟು ಗೂಡಿಸಿ ಸರಿಯಾದ ರೀತಿಯಲ್ಲಿ ಅವುಗಳನ್ನು , ಒಂದರ ಮೇಲೆ ಒಂದು ಜೋಡಿಸಿ , ವೃತ್ತಾಕಾರದ  ಹಸನು ಗೊಳಿಸಿದ ಜಾಗದಲ್ಲಿ ಕೆಂಡ ತುಳಿಯುವ (ಹಾಯುವ) ಕಾರ್ಯಕ್ಕೆ  ಸಿದ್ಧ ಮಾಡುತ್ತಿದೆವ್ವು ಈ ವೃತ್ತದ ಪರಿದಿಯ ಸುತ್ತ ಒಂದರಿಂದ ಒಂದಕ್ಕೆ ಸುಮಾರು ೩ ಅಡಿ ಅಂತರವಿರುವಂತೆ  ಗಳುಗಳನ್ನು ನೆಟ್ಟು ಸುತ್ತ ಹಗ್ಗ ಕಟ್ಟುತ್ತಿದ್ದೆವು .ಕುಸ್ತಿಯ  ಅಖಾಡ ದಂತೆ . ಕೆಂಡ ತುಳಿಯುವ ದೃಶ್ಯವನ್ನು ಜನರು ಈ ಪರಿದಿಯ ಹೊರಗೆ ಕುಳಿತು ವೀಕ್ಷಿಸಬೇಕು ಕಾಲುದಾರಿಯ ಎರಡು ಕಡೆ ಬಿದಿರನ ಬೊಂಬುಗಳನ್ನು ನೆಟ್ಟು ಹಗದಿಂದ ಬಿಗಿದು ಬೇಲಿಯ ರೀತಿ ಮಾಡುತ್ತಿದೆವು . ಹೀಗೆ ದೇವಸ್ತಾನದ ಆವರಣವನೆಲ್ಲ ಸ್ವಚ್ಛ ಗೊಳಿಸಿದ ನಮಗೆ ಏನೋ ಸಾದಿಸಿದ ಹಿಗ್ಗು . ಸಂಜೆಯ ವೇಳೆಗೆ ಊರಿನ ಹಿರಿಯರಿಂದ ಎಲ್ಲ ಮಕ್ಕಳಿಗೂ  ೫೦ ಪೈಸೆ ಯಾ ಎರಡು ಪೆಪ್ಪೆರ್ಮೆಂಟ್  ಸಿಗುತಿತ್ತು .

ಹಬ್ಬದ ದಿನ , ಈಡಿ ಹಳ್ಳಿಯನ್ನು ಮಾವಿನ ಸೊಪ್ಪು , ಬಣ್ಣದ ಕಾಗದ ಗಳಿಂದ  ಸಿನ್ಗರಿಸ್ತುತ್ತಿದ್ದರು . ಎಲ್ಲ ದೊಡ್ಡ , ಸಣ್ಣ ರಸ್ತೆಗಳು , ಸಣ್ಣ ಕೇರಿಗಳು,ಓಣಿಗಳ ಎಕ್ಕೆಲಗಳಲ್ಲಿ  ಸೀರಿಯಲ್ ದೀಪಗಳನ್ನು ಹಿಡಿದು ನಿಂತ ಕಂಬಗಳು ಸಾಲಾಗಿ ತಲೆ ಎತ್ತುತ್ತಿದ್ದವು  . ಊರಿನ ಸಂತೆ ನಡೆಯುತಿದ್ದ ಜಾಗವೇ ಜಾತ್ರೆ ಕಟ್ಟುವ  ಜಾಗ . ಜಾತ್ರೆ ಗೆ ಹೋಗುವುದೆಂದರೆ ನಮಗೆ ಕುಶಿಯೋ ಕುಶಿ . ಜಾತ್ರೆಯಲ್ಲಿ ಮಕ್ಕಳ ಆಟಿಕೆಗಳ , ಪಾತ್ರೆಗಳ, ಕರಿದ ತಿಂಡಿ ತಿನುಸುಗಳ, ಬಟ್ಟೆ ಹೀಗೆ ವಿವಿಧ ಅಂಗಡಿಗಳು  ಜೊತೆಗೆ ಮೋಜಿನ ಕೆಲವು ಆಟಗಳು ಇರುತಿದ್ದವು . ಅದೇ ಸಂತೆಯ ಮೈದಾನದ ಒಂದು ಭಾಗದಲ್ಲಿ , ಬಯಲಾಟದ ವೇಧಿಕೆ ಸಿದ್ಧವಗುತಿತ್ತು  . ಇಲ್ಲಿ ಹಬ್ಬವಾದ ನಂತರ ಒಂದು ವಾರಗಳ ಕಾಲ, ಯಕ್ಷಗಾನ , ನಾಟಕ , ಹರಿಕತೆ, ಆರ್ಕೆಸ್ಟ್ರ ಮುಂತಾದ ಕರ್ಯಕ್ರಮಗಳು  ನಡೆಯುತಿತ್ತು . ಆಗಲೇ ಟೀವಿ ,ಸಿನಿಮಾ ಹುಚ್ಚ್ಚು ಶುರುವಾಗಿದ್ದ ಕಾಲವದರಿಂದ , ಹರಿಕತೆ ನಾಟಕಗಳಿಗೆ ಸೇರುತಿದ್ದ ಜನ ಕಡಿಮೆಯೇ . 

ಎಲ್ಲ ಊರಿನಂತೆ  , ಹೆಬ್ಬಾಲೆಯಲ್ಲೂ  , ಬಸ್ಸು ಬಂದು ಇಳಿಯುತಿದ್ದ ಜಾಗದಲ್ಲಿ , ಕೆಲವು ಅಂಗಡಿ ಮುಂಗಟ್ಟುಗಳು , ಹೋಟೆಲ್ಗಳು ಇರುತಿದ್ದವು . ಊರಿನ ಮನೆಗಳು ಸಿಗಬೇಕೆಂದರೆ ಸ್ವಲ್ಪ ದೂರ ಊರ ಒಳಗೆ ನಡೆದು ಹೋಗ್ಬೇಕು .ಬಸ್ಸು ನಿಲ್ದಾಣದ , ಬಲಕ್ಕೆ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರ ನಡೆದು ಹೋದರೆ ಮೊದಲು ಸಿಗುತಿದ್ದದ್ದು  ಗ್ರಾಮ ಪಂಚಯಿತಿ ಕಚೇರಿ  ನಂತರ ವಾಸದ ಮನೆಗಳು ಸಿಗುತಿದ್ದವು , ಇನ್ನು ನಿಲ್ದಾಣದ ಎಡಕ್ಕೆ , ಸರ್ಕಾರೀ ಶಾಲೆ ,ಅದರ ಪಕ್ಕದಲ್ಲೇ ಸ್ವಲ್ಪ ದೂರ ಪಶು ವೈದ್ಯಾಲಯ , ಮತ್ತೆ ಕೆಲವನ್ನು ಮನೆಗಳು .ನಿಲ್ದಾಣದಿಂದ ಹೊರಟ ಬಸ್ಸು ಮುಂದೆ ಹೋಗುವ ದಾರಿಯಲ್ಲೇ ಸುಮಾರು ಅರ್ಧ ಕಿಲೋಮೀಟರು ದೂರದಲ್ಲೇ  ನಮ್ ಮನೆ .  ಅದು ಬರಿ ಶಿಕ್ಷಕರು ನೆಲೆಸಲು  , ಸರ್ಕಾರ ನಿರ್ಮಿಸಿದ್ದ  ವಸತಿ  ಗೃಹಗಳು ಇದ್ದ ಜಾಗ .ನಮ್ಮ ಮನೆಯ ಅಕ್ಕ ಪಕ್ಕ ಇದ್ದವರೆಲ್ಲ, ಆ ಊರಿನವರಾಗಿರದೆ ಬೇರೆ ಕಡೆ ಇಂದ ವರ್ಗಾವಣೆ ಆಗಿ ಬಂದವರೇ ಜಾಸ್ತಿ . ಆದರಿಂದ ಅಲ್ಲಿ ಸ್ವಲ್ಪ ಹಬ್ಬದ ವಾತಾವರಣ ಕಡಿಮೆ .ಶಿಕ್ಷಕರ ಬಡಾವಣೆಯಲ್ಲಿದ್ದ ನಮಗೆಲ್ಲ , ಹಬ್ಬದ ನಿಜವಾದ ವೈಭವ , ಆಚರಣೆ  ನೋಡಬೇಕಾದ್ರೆ ಊರ ಒಳಗೆ ಹೋಗಬೇಕಿತ್ತು .ಬೇರೆ ಎಲ್ಲ ಜಾತ್ರೆಗಳನ್ತೆ  ಬನಶನಕ್ರಿ  ಜಾತ್ರೆ ಹಗಲಿನ ವೇಳೆ ನಡೆಯುತಿರಲಿಲ್ಲ  ಜಾತ್ರೆ ತೇರು ನಡೆಯುತಿದಿದ್ದು ರಾತ್ರಿ ವೇಳೆ . ಊರಿನವರ ಎಲ್ಲ ಮೆನೆಗಳು ನೆಂಟರು,ಬಂಧು -ಬಾಂದವರಿಂದ ತುಂಬಿ ಹೋಗಿರುತಿತ್ತು . ಎಲ್ಲ ಮನೆಗಳುಲ್ಲು ಒಂದೇ ಸಾಮಾನ್ಯ ಊಟ ತಿಂಡಿ ತಿನಿಸುಗಳು , ವಡೆ, ಕಜ್ಜಾಯ ಪಾಯಸ. ಹೆಂಗಸಿರಿಗೆ ಅಡುಗೆ ಮನೆ ಬಿಡಲು ಪುರುಸೊತ್ತೇ ಇಲ್ಲ .ಮಕ್ಕಳಿಗೆ ತಮ್ಮ ದೂರದ ಊರಿನ ಅಪರೂಪಕ್ಕೆ ಬರುವ ನೆಂಟರಿಷ್ಟರ ಮಕ್ಕಳೊಂದಿಗೆ ಆಟವಾಡುವುದು , ಅವರಿವರ ಮನೆಗೆ ಹೋಗಿ  ಕಜ್ಜಾಯ ವಡೆ ತಿನ್ನುವುದು ,ಅಲಂಕೃತ ಗೊಂಡ ಬೀದಿಗಳಲ್ಲಿ ತಿರುಗುವುದು , ಜಾತ್ರಯಲ್ಲಿ ಅಡ್ಡಡುವುದು ,ಗಿರಗಿತ್ತಲೇ ,ಉಯ್ಯಾಲೆ ಮುಂತದ ಆಟಗಳಿಗೆ ೨ ರೂಪಾಯಿ , ೫ ರೂಪಾಯಿ ಕೊಟ್ಟು ಆಡುವುದು ಇದೆ ಕೆಲಸ . ಹಗಲೆಲ್ಲ ಕೇವಲ ಮನೆಯಲ್ಲೇ ಇದ್ದ ಹಬ್ಬದ ವಾತಾವರಣ ಸಂಜೆಯ ವೇಳೆಗೆ ರಸ್ತೆಗೆ ಧುಮುಕುತ್ತದ್ದೆ . ಮಿಕ್ಕ ದಿನಗಳ್ಳಲ್ಲಿ ಹಗಲೇ ಅಪರೂಪಕ್ಕೆ ಆಗೊಮ್ಮೆ ಈಗೊಮ್ಮೆ ಓಡಾಡುವ  ಬಸ್ಸು, ಜೀಪು , ಸಣ್ಣ ವ್ಯಾನ್ ಗಳು ಅ ಎರಡು ದಿನ ರಾತ್ರಿ ಹಗಲು ಲೆಕ್ಕಿಸದೆ ಪಕ್ಕದ ಹಳ್ಳಿಗಳಿಗೆ ಹೋಗುವ ಅಲ್ಲಿಂದ ಬರುವ ಜನರನ್ನು  ಸಾಗಿಸುತ್ತದೆ   

ಸುಮಾರು ರಾತ್ರಿ ೧೧ ಗಂಟೆಯ ವೇಳೆಗೆ ಊರಿನ ಮಧ್ಯದಲ್ಲಿ ಇರುವು  ಭೈರವ ದೇವಸ್ತಾನದಿಂದ ಬನಶಂಕರಿಯ ಉತ್ಸವ ಮೂರ್ಯಿಯ ಮೆರವಣಿಗೆ ಚಾಲೆಯಗುತ್ತದೆ . ತೇರು ತಮ್ಮ ಬೀದಿಗೆ ಬರುವ ಮೊದಲು ಅಲ್ಲಿನ ನಿವಾಸಿಗಳು ,ರಸ್ತೆಗಳಿಗೆ  ನೀರು ಹಾಕಿ ರಂಗೋಲಿ ಇಟ್ಟು  , ಕೈಯಲ್ಲಿ ಹೂವು ,ಹಣ್ಣು,ತೆಂಗಿನಕಾಯಿ ತಟ್ಟೆ ಹಿಡಿದು ದೇವರನ್ನು ಸ್ವಾಗತಿಸಲು ಸಿದ್ದವಾಗುತ್ತಾರೆ  . ಉತ್ಸವ್ದ  ಮುಂದೆ  ಮಂಗಳ ವಾದ್ಯಗಳ ಜೊತೆ, ಪಟಾಕಿ ಸದ್ದು ಸೇರಿ ಎಲ್ಲರಲ್ಲೂ ಉತ್ಸಾಹವನ್ನು ಮೂಡಿಸುತಿದ್ದವು. ಜಾತ್ರೆಯ ಇನ್ನೊಂದು ವಿಶೀಷ "ಕೆಂಡ ತುಳಿಯುವುದು" . ಕೆಂಡ ತುಳಿಯುವುದು ದೇವರಿಗೆ ಸಲ್ಲಿಸುತ್ತಿದ್ದ ಹರಕೆ. ಹೀಗೆ ಹರಸಿಕೊಂಡವರಲ್ಲಿ ಗಂಡಸರು, ಹೆಂಗಸರು ಮತ್ತು ಮಕ್ಕಳು ಸಹ ಇರುತ್ತಿದ್ದರು . ಇವರೆಲ್ಲ ದಿನವೆಲ್ಲ ಉಪವಾಸವಿದ್ದು , ತೇರು ಹೊರಡುವು ವೇಳೆಗೆ ಭೈರವ ದೇವಸ್ತಾನದ ಹತ್ತಿರ ಬಂದು ಸೇರುತ್ತಿದ್ದರು. ಹರಕೆ ಹೊತ್ತವರು ಭೈರವ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ , ಹಣ್ಣು ಹೂವು ಮತ್ತಿತರ ಪೂಜಾ ಸಾಮಗ್ರಿಗಳು ಇರುತ್ತಿದ್ದ ಬುಟ್ತಿಯನ್ನು ತಲೆಯ ಮೇಲೆ ಹೊತ್ತು ಬರಿಗಾಲಲ್ಲಿ ಬಿಳಿಯ ಒದ್ದೆ ಬಟ್ಟೆಯ ಮೇಲೆ ನಡೆಯುತ್ತಾ ತೇರನ್ನು ಹಿಮ್ಬಲಿಸುತ್ತಿದ್ದರು. ಹೀಗೆ ಹೊರಟ ಮೆರವಣಿಗೆ ಊರಿನ ಎಲ್ಲ ಪ್ರಮುಖ ಬೀದಿಗಳಲ್ಲಿ ಚಲಿಸಿ  ಕೊನೆಗೆ ಬನಶಂಕರಿ ದೇವಸ್ತಾನಕ್ಕೆ ಬಂದು ತಲುಪುತ್ತದ್ದೆ  ಉತ್ಸವ ಬನಶಂಕರಿ ದೇವಸ್ತಾನ ತಲುಪುವ ವೇಳೆಗೆ ಸುಮಾರು ರಾತ್ರಿ ೨ -೩  ಗಂಟೆ ಆಗಿರುತಿತ್ತು .ಅಷ್ಟರಲ್ಲಿ ಒಂದು ವರ್ಷದಿಂದ ,ಮುಚಿರುತ್ತಿದ್ದ  ದೇವಸ್ಥಾನದ  ಬಾಗಿಲು ತೆಗೆದು , ಒಳಗಿನ ದೇವಿಗೆ , ಪೂಜೆ ಅಭಿಷೇಕ ಅಲಂಕರಗಲ್ಲೆಲ್ಲ ನಡೆಯುತಿರುತ್ತದೆ .ಇಲ್ಲಿ ಆಚರಿಸುತ್ತಿದ್ದ ಇನ್ನೊಂದು ಕೂತುಹಲ ಪದ್ದತ್ತಿ ಎಂದರೆ . ಪೂಜಾರಿಯನ್ನು ಹೊರತು ಪಡಿಸಿ ಜಾತ್ರೆ ರಾತ್ರಿ  ಕೇವಲ ಹೆಂಗಸರಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶ. ಗರ್ಭಗುಡಿ ಎಂಬ ಪ್ರತ್ಯೇಕತೆ ಇಲ್ಲದ್ದ , ನಮ್ಮ ದೇಹವನ್ನು ಸ್ವಲ್ಪ ಬ್ಬಗ್ಗಿಸೆಯೇ ಒಳಗೆ ಹೋಗಬೇಕಾದ ಒಂದು ಸಣ್ಣ ಗುಡಿಯಗಿದ್ದ , ಅದರೊಳಗೆ ಜಾತ್ರೆಯ ರಾತ್ರಿ ಹೋಗಿ ದೇವಿಯ ದರ್ಶನ ಮಾಡಿಕೊಂಡು ಪೂಜೆ ಮಾಡಿಸುವುದೇ ಹರಸಾಹಸ,ನೂಕು ನುಗ್ಗಲ್ಲು

ದೇವರ ಉತ್ಸವ ಬನಶಂಕರಿ ದೇವಸ್ತಾನ ತಲುಪುವ ವರೆಗೂ , ಯಾರಿಗೂ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಆದರೆ ವರ್ಷಕ್ಕೆ ಒಂದೇ ಬಾರಿ ತೆರೆಯುತೀದ ದೇವಸ್ಥಾನದ ಮುಂದೆ ಜನ ಸಾಲು ಗಟ್ಟಿ ೪-೫ ಗಂಟೆಗಳ ಕಾಲ ಕಾಯೂತಿದ್ದರು . ಊರಿನ ಬೀದಿಗಳಲ್ಲಿ ತೇರು ನಡೆಯುತ್ತಿರುವ ವೇಳೆ , ಬನಶಂಕರಿ ದೇವಸ್ಥಾನದ ಮುಂಬಾಗದಲ್ಲಿ ಕೆಂಡ ಸಿದ್ಧಪಡಿಸುವ ಕಾರ್ಯ ಶುರುವಾಗುತ್ತಿತ್ತು .ಈ  ಕೆಂಡ ತುಳಿಯುವ ಕಾರ್ಯ ಕರ್ಮ ನೋಡಲು ಹಳ್ಳಿಯ ಜನ , ಚಾಪೆ , ದಿಮ್ಪ್ಬು , ಜಮಖಾನ ಮುಂತಾದ , ಸಾಮಗ್ರಿಗಳೊಂದಿಗೆ ಬೆಂಕಿ ಹಾಕುವ ಸುತ್ತ ಜನ ಜಮ್ಮಯಿಸುತ್ತಾರೆ . ರಾತ್ರಿ ಸುಮಾರು ೧೦ ಗಂಟೆಗೆ ಬೆಕಿ ಹಾಕಲು ಶುರು ಮಾಡಿದರೆ ಬೆಳಿಗಿನ ಜಾವ ೪ ಗಂಟೆಯ ವೇಳೆಗೆ ಎಲ್ಲ ಉರಿದು ಕೆಂಡ ಸಿದ್ದವಗುತ್ತದ್ದೆ .  ಮೊದಲೇ ಅಣಿ ಮಾಡಿ ಸುಮಾರು ೧೦ ಅಡಿ ಅಗಲ ಎತ್ತರದವರೆಗೂ ಜೋಡಿಸಿದ್ದ ಮರದ ದಿಮ್ಮಿಗಳಿಗೆ ಬೆಂಕಿ ,ಕೊಟ್ಟು ಅದನ್ನು ಕೆಂಡ ಮಾಡುವ ಕೆಲಸ ಸುಲಭದಲ್ಲ .ಕೆಂಡ ಮಾಡುವ ಎ ಧೀರ್ಗ ಕಾಲದ ಕೆಲಸಕ್ಕೆಂದೇ ಊರಿಂದ ೩-೪ ಜನ ಗಟ್ಟಿಯಾಗಿರುವ ಗಂಡಸರು ನಿಲ್ಲುತ್ತಾರೆ.ಬಿಸಿ  ನೀರಿನ ಹಂಡೆಗೆ  ಬೆಂಕಿ ಮಾಡುವಷ್ಟು ಅನುಭವ ಇದ್ದಾರೆ ಸಾಲದು , ಚುಮು ಚುಮು ಚಳಿಯಲ್ಲಿ ಬೆಂಕಿ ಆರದಂತೆ ನ, ಮರದ ದಿಮ್ಮಿಗಳು ಪೂರ್ತಿಯಾಗಿಉರಿಯುವಂತೆ  ನೋಡಿಕೊಳ್ಳಬೇಕು  ಒಂದರ ಮೇಲೊಂದು ಜೋಡಿಸಿಟ್ಟ ಮರದ ದಿಮ್ಮಿಗಳು ಬೆಂಕಿ ಹೆಚ್ಚದನತೆ , ಕೆಳಗೆ ಉರುಳುತ್ತವೆ . ಅವುಗಳನ್ನು ಮತ್ತೆ ಎಳೆದು ತಂದು ಒಟ್ಟು ಮಾಡ್ಬೇಕು .ಹತ್ತಿರ ಸುಳಿದರೆ ಎಲ್ಲಿ ನಮ್ಮನೆ ಬೆಂಕಿ ಆವರಿಸುವುದೋ ಎನ್ನುವಷ್ಟು  ಧಗೆ,ಶಾಖ . ಕೆಂಡ ಹಾಯುವುದನ್ನು ನೋಡಲು ಬರುವ ಜನ ಚಳಿಯಿಂದ  ರಕ್ಷಣೆಗೆ ಬೆಚ್ಚ್ಚಗೆ ಬಟ್ಟೆ ತೊಟ್ಟು ಬಂದರೆ , ಬೆಂಕಿ ಮಾಡುವರು ಬೆಂಕಿಯ ಮುಂದೆ ಬೆಂದು ಅವರ ಮಯಿಂದ ಬೆವರು ಇಳಿಯುತಿರುತ್ತದೆ - ಡಿಸೆಂಬರ್ ಮಾಸದ  ಕೊಡಗಿನ ರಾತ್ರಿ ಚಳಿಯಲ್ಲೂ  ಬೆವರಿಳಿಸುವ ಭಯಂಕರ ಬೆಂಕಿ. ಬೆಂಕಿಯಾ ಜ್ವಾಲೆ ಹೆಚ್ಚದಂತೆ ಅ ಚಳಿಯಲ್ಲೂ ಸುತ್ತಲಿನ  ಮಣ್ಣಿನ ನೆಲ ಕಾಲು ಇಡಲಾಗದಷ್ಟು ಬಿಸಿಯಾಗುತ್ತದೆ  ಅದಕಾಗಿಯೇ ಆಗಿಂದಾಗೆ ಸುತ್ತಣ ನೆಲೆದ ಮೇಲೆ ಬಿನ್ದಿಗೆಗಟ್ಟಲೆ ನೀರು ತಂದು ಸುರಿಯುತ್ತಾರೆ . ಒಂದೊಂದೇ ಮರದ ದಿಮ್ಮಿಗಳು ,ಸಣ್ಣ ರೆಂಬೆ ,ಕೊಂಬೆಗಳನ್ನೂ ಕಬಳಿಸುತ್ತಾ ಬೆಂಕಿ , ಪ್ರಜ್ವಲಿಸುತ್ತದೆ. ಸರಿಸುಮಾರು ೪ ಗಂಟೆ ಬೆಳಗಿನ ಜಾವಕ್ಕೆ ೧೦ ಅಡಿ ಉದ್ದ ,೩ ಅಡಿ ಎತ್ತರದ ಕೆಂಡ ಹಾಸಿಗೆ ಸಿದ್ದವಗುತ್ತದ್ದೆ .

ಎಲ್ಲ ಮುಖ್ಯ ಬೀದಿಗಳಲ್ಲಿ ,ಚಲಿಸಿದ  ತೇರು ದೇವಸ್ತಾನಕ್ಕೆ ಬರುವ ವೇಳೆಗೆ ಆಗಲೇ ಗಂಟೆ ೨ ಆಗಿರುತ್ತದೆ . ನಂತರ , ಉತ್ಸವ ಮೂರ್ತಿಗೆ ಪೂಜೆ ಆಗಿ,ಆರತಿ ಎಲ್ಲ ಮುಗಿಯುವ ವೇಳೆಗೆ ೪ ಗಂಟೆ ಆಗುತಿತ್ತು . ಉತ್ಸವ ಮೂರ್ತ್ಯಿಯ ಪೂಜೆ ಆದ ಮೇಲೆ ಎಲ್ಲ ಎಲ್ಲರು ಕಾತುರದಿಂದ ಕಾಯುವ ಕೆಂಡ ಹಾಯುವ ಕಾರ್ಯಕ್ರಮ .ನಾನು ಗಮನಿಸಿದ ಇನ್ನೊಂದ ವಿಶೇಷ ಪದ್ದತ್ತಿ  ಮೊದಲು ಅಲ್ಲಿನ ಪೂಜಾರಿ ಕೆಂಡ ಹಾಯಬೇಕು !!! ನಂತರ ಹರಸಿಕೊಂಡ ಭಕ್ತರು - ಮೊದಲು ಗಂಡಸರು ಮತ್ತು ಗಂಡು ಮಕ್ಕಳು ನಂತರ ಹೆಂಗಸರು ಮತ್ತು ಹೆಣ್ಣು ಮಕ್ಕಳ ಸರದಿ .ಕೆಲವರು ಕೆಂಡದ ಮೇಲೆ ಸಮಾಧಾನವಾಗಿ ಭಕ್ತಿಇಂದ ನಡೆದರೆ, ಇನ್ನು ಕೆಲವರು ಮುಗಿದರೆ ಸಾಕು ಎಂದು ಓಟ .ಹೀಗೆ  ಓದುವವರನ್ನು ನೋಡಿ  ಜನ ಕೇಕೇ ಹಾಕಿ ನಗುತ್ತಾರೆ . ಇನ್ನು ಕೆಲವರು  , ಹರಕೆ ಹೊತಿದ್ದರು , ಅದಕ್ಕಾಗಿ ಬೆಳ್ಳಗ್ಗೆ ಇಂದ ಉಪವಾಸ ಇದ್ದರು , ಕೆಂಡ ನೋಡಿ ಭಯ ಪಟ್ಟು ಸಾಧ್ಯವಿಲ್ಲವೆಂದು ಹಿಂದೆ ಸರಿಯುತಾರೆ ಯಾರಿಗೂ ಬಲವಂತವಿಲ್ಲ .ಹೀಗೆ ಕೆಂಡ ಹಾಯುವ ಕೆಲವರಿಗೆ ಯಾವುದೇ ರೀತಿಯ ನೋವಾಗಲೀ ಗಾಯವಾಗಲಿ ಆಗುವುದಿಲ್ಲ . ಇನ್ನು ಕೆಲವರಿಗೆ  ಸಣ್ಣ ಪುಟ್ಟ ಸುಟ್ಟ ಗಾಯಗಳು ,ಬೊಬ್ಬೆಗಳು ಆಗುತ್ತವೆ - ಅಂತವರು ವ್ರತವನ್ನು ನಿಷ್ಠೆ ಇಂದ ಪಾಲಿಸಿಲ್ಲ ಎಂಬುದು ಇಲ್ಲಿಯವರ ನಂಬಿಕೆ . ನಿಜವಾದ ಇದರ ಹಿಂದಿರುವ ವೈಜ್ಞಾನಿಕ ರಹಸ್ಯ ನಂಗಂತೂ ತಿಳಿದಿಲ್ಲ. 

ಒಟ್ಟಿನಲ್ಲಿ , ಎಲ್ಲ ಹರಕೆಗಳ ಪೂಜೆ ಮುಗಿದ ಮೇಲೆ  ಸಾಲಲ್ಲಿ ಕಾಯುತ್ತ ನಿಂತಿದ್ದ ಭಕ್ತಾದಿಗಳಿಗೆ ದೇವಸ್ತಾನದ ಒಳಗೆ ಪ್ರವೇಶ ಸುಮಾರು ಬೆಳಿಗ್ಗೆ ೬ ಗಂಟೆಯ ವೇಳೆಗೆ ಎಲ್ಲ ಪೂಜೆಗಳು ಮುಗಿದು , ಜನ ಸ್ವಲ್ಪ ಕಡಿಮೆಯಗುತಾರೆ . ಹಿಂದಿನ ರಾತ್ರಿ ತೆರದ ದೇವಸ್ತಾನ ಮರುದಿನ ಪೂರ್ತಿ ತೆರೆದೇ ಇರುತ್ತದ್ದೆ . ಎರಡನೇ ದಿನ ಪೂರ್ತಿ ಪೂಜೆ ಪುನಸ್ಕಾರಗಳು.ಸಂಜೆಯ ವೇಳೆಗೆ ಮತ್ತೊಮ್ಮೆ ಪೂಜೆ ಸಲ್ಲಿಸಿ ಬಾಗಿಲು ಹಾಕಿದರೆ ಮುಗಿಯಿತು ಇನ್ನು ಒಂದು ವರ್ಷ ಕಾಯಬೇಕು.

ನನ್ನ ಮಾತು ಕಥೆ ಮುಗಿಯುವ ವೇಳೆಗೆ ಕುಶಲ್ನಗರಕ್ಕೆ ಸ್ವಾಗತ ಎನ್ನುವ ಬೋರ್ಡ್ ನನ್ನ ಕಣ್ಣಿಗೆ ಬಿತು . ಅರೆ!! ಸಮಯ ಹೋಗಿದ್ದೆ ತಿಳಿಯಲಿಲ್ಲ ಎಂದು ತಕ್ಷಣ ನನ್ನ  ಮೊಬೈಲ್ ತೆಗೆದುಕೊಂಡು ಇನ್ನು ೫ ನಿಮಿಷದಲ್ಲಿ ನಾವು ಮನೆಯಲ್ಲಿ ಇರುತ್ತೇವೆ  ಎಂದು ಅಮ್ಮನಿಗೆ ಹೇಳಿದೆ . ಮನೆಗೆ ಹೋದ ಮೇಲೆ ಮೊದಲು ಇಬ್ಬರು  ಬಿಸಿ ಬಿಸಿ ಕಾಫೀ ಹೀರಿದೇವು . ನಂತರ ನಾನು ಸ್ನಾನ ಮುಗಿಸಿ ಅಮ್ಮ ಕೊಟ್ಟ ಬಿಸಿ ಬಿಸಿ ಮೆಂತ್ಯ ದೋಸೆ ತಿನ್ತುತ್ತ ಅಡುಗೆ ಮನೆ ಕಟ್ಟೆ ಮೇಲೆ ಕುಳಿತೆ .ಅಷ್ಟರಲ್ಲಿ ಅಪ್ಪನ ಕಾರನ್ನು ಗ್ಯಾರೇಜು ಇಂದ  ಹೊರಗೆ ತೆಗೆದು , ನಮ್ಮ ಕಾರನ್ನು  ಒರೆಸಿ ಅದನ್ನು ಗ್ಯಾರೇಜು ಅಲ್ಲಿ ನಿಲ್ಲಿಸಿ ಕಿರಣ್ ಸ್ನಾನ ಮಾಡಲು ಹೋದರು.

ಮೊದಲೇ ಪ್ಲಾನ್ ಮಾಡಿದಂತೆ , ನಾನು ,ಅಪ್ಪ, ಅಮ್ಮ ,ಕಿರಣ್ , ನಾಲ್ವರು ಮಧ್ಯನ್ನದ ಊಟ ಮುಗಿಸಿ ,ಅಪ್ಪ ನ ಕೆಂಪು ನ್ಯಾನೋ ಕಾರ್ ಹತ್ತಿ ಹೆಬ್ಬಾಲೆಗೆ ಹೊರೆಟೆವು. ಕುಶಾಲನಗರ ದಿಂದ ೧೫ ಕಿ.ಮೀ ಗಳ ದಾರಿ .ಹಳ್ಳಿಯ ದೇವಸ್ತಾನವಾದ್ದರಿಂದ , ಅಲ್ಲಿ ಪ್ರತ್ತ್ಯೇಕ ಪಾರ್ಕಿಂಗ್ ವ್ಯವಸ್ತೆ ಇರುವುದಿಲ ಪಟ್ಟಣದಂತೆ .ಆದ್ದರಿಂದ ನಾವು ಕಾರ್ ಅನ್ನು ದೇವಸ್ತನದಿಂದ ಸುಮಾರು ಅರ್ಧ ಕಿ. ಮೀ  ದೂರ ಪರಿಚಯದವರ ಮನೆಯಲ್ಲಿ ನಿಲ್ಲಿಸಿ ಹೋದೆವು. ನಡೆದುಕೊಂಡು ದೇವಸ್ತಾನ ತಲುಪಿದ ಮೇಲೆ ನಂಗೆ ಕಂಡ ಮೊದಲ ಆಶ್ಚರ್ಯ ಅಲ್ಲಿ ನಾನು ನೋಡಿದ್ದ ಸಣ್ಣ ಗುಡಿ ಇರಲಿಲ್ಲ. ಬದಲಾಗಿ ದೊಡ್ಡದು ಎಂದು ಹೇಳಬಹುದಾದ ದೇವಸ್ತಾನ. ಬನಶಂಕರಿಯ ಸಣ್ಣ ಗುಡಿ ಎಲ್ಲ ರೀತಿಯ ಬದಲಾವಣೆ ಪಡೆದಿತ್ತು.ಗರ್ಭಗುಡಿ ಇಲ್ಲದ ದೇವಸ್ತಾನಕ್ಕೆ ಈಗ ಗರ್ಭಗುಡಿ ನಿರ್ಮಾಣವಾಗಿದೆ .!!  ದೇವಸ್ತಾನದ ಸುತ್ತ ಮೊದಲಿನಷ್ಟೂ ದಟ್ಟ್ಟಕಾಡು ಇರಲಿಲ್ಲ. ಮೊದಲು ಕೇವಲ ಬಂಶಕರಿ ಇದ್ದ ಜಾಗದಲ್ಲಿ ಈಗ ಪುಟ್ಟ ಗಣಪತಿ ಮತ್ತು ನವಗ್ರಹ ದೇವಸ್ತನಗಳು ತಲೆ ಎತ್ತಿವೆ !! ದೇವಸ್ತಾನದ ಗೋಪುರಗಳನ್ನು ಸರಿಯಾಗಿ ಗಮನಿಸಿದರೆ  ನುರಿತ ಶಿಲ್ಪಿಗಳು ಕೆಲಸವಲ್ಲ ಎಂದು ಸಲೀಸಾಗಿ ಗೊತ್ತಾಗುತ್ತದೆ. ಭಾಹ್ಯವಾಗಿ ಏನೇ ಬದಲಾವಣೆಗಲಿದ್ದರು , ದೇವರು ಅದೇ ಎಂದು ನಾನು ಹೊಸದಾಗಿ ನಿರ್ಮಾಣ ಗೊಂಡಿದ್ದ ಗರ್ಭಗುಡಿಯ ಒಳಗೆ ಬಗ್ಗಿ ನೋಡಿದೆ . ಇನ್ನೊಂದು ಆಶ್ಚರ್ಯ - ಮೊದಲು ಅಲ್ಲಿ ಇದ್ದದ್ದು ಮೂರು ಲಿಂಗಾಕಾರದ ಕಲ್ಲುಗಳು ಅದೇ ದೇವರು, ಅದಕ್ಕೆ ಹಬ್ಬದ ದಿನ ಸೀರೆ ಉಡಿಸಿ ಸಿನ್ಗರಿಸುತ್ತಿದ್ದರು . ಈಗ ಅಲ್ಲಿ ೪ ಕೈಗಳ ದೇವಿಯ ಮೂರ್ತಿ ಇದೆ . ಆ ಮೂಲ ದೇವರು ಎಲ್ಲಿ ಎಂದು ನಾನು ಅಲ್ಲಿಯ ಪುರೋಹಿತರನ್ನು ಕೇಳಿದಕ್ಕೆ ,  ಅದು ಅಲ್ಲೇ ವಿಗ್ರಹದ ಹಿಂದೇ ಇದೆ . ಈಗ ಪೂಜೆ ಎಲ್ಲ ಈ  ಪ್ರತಿಷ್ಟಪನೆ ಗೊಂಡಿರುವ ದೇವಿಯ ವಿಗ್ರಹಕ್ಕೆ ಎಂದರು !! ನಂಗೆ ಒಂದು ಅರ್ತವಾಗದೆ ಸುಮ್ಮನಾದೆ. ಇನ್ನು ಒಂದು ನಂಗೆ ಅಚ್ಚರಿ ಮೂಡಿಸಿದ ಸಂಗತಿ - ಮೊದಲು ವರ್ಷದಲ್ಲಿ ಒಂದೇ ಬಾರಿ ಬಾಗಿಲು ತೆರೆಯುತಿದ್ದ ಪದ್ಧತಿ ಈಗ ಇಲ್ಲವಾಗಿದೆ . ಬೇರೆ ಎಲ್ಲ ದೇವಸ್ಥನಗಳಂತೆ ಪ್ರತಿ ದಿನ ಇಲ್ಲಿ ಈಗ ಪೂಜೆ ನಡೆಯುತ್ತದೆ .

ದೇವರ ಪೂಜೆ ಮುಗಿಸಿ , ಜಾತ್ರೆಯಲ್ಲಿ ಒಂದು ಬಾರಿ ಅಡ್ಡಾಡಿ ಮತ್ತೆ ಕಾರ್ ನಿಲ್ಲಿಸಿದ್ದ ಜಾಗಕ್ಕೆ ಬಂದೆವು . ವಾಪಸು ಮನೆಗೆ ಹಿಂದಿರುಗುವಾಗ ಕಿರಣ್ ಕೆಂಡ ಹಾಯುವ ದೃಶ್ಯ ನೋಡಬೇಕು ಎಂಬ ಆಸೆಯನ್ನು ಹೇಳಿದರು.ಹತ್ತು ಗಂಟೆಗೆಎಲ್ಲ ಜನ ಸೇರುತ್ತಾರೆ, ಮುಂದಿನ ಸಾಲಲ್ಲಿ ಕೂತರೆ ಮಾತ್ರ , ಕೆಂಡ ತುಳಿಯುವ ದೃಶ್ಯ ಕಾಣುತ್ತದೆ ಎಂದು ನಾನು ಕಿರಣ್ ರಾತ್ರಿಯ ಊಟ ಬೇಗ ಮುಗಿಸಿ ಇಬ್ಬರೇ ಕಾರ್ ತೆಗೆದುಕೊಂಡು ಮತ್ತೆ ಹೆಬ್ಬಾಲೆಗೆ ಹೋದೆವು . ಸುಮಾರು ೧೦.೩೦ ರ ವೇಳೆಗೆ ದೇವಸ್ಥಾನ ತಲುಪಿದೆವು . ಅಲ್ಲಿ ಮೊದಲಿನಂತೆ ಅಷ್ಟು ಜನ ಇರಲಿಲ್ಲ . ೨ ಗಂಟೆಯ ವೇಳೆಗೆ ಉತ್ಸವ ಮೂರ್ತಿ ಬಂಡ ಮೇಲೆ ಜನ ಸೇರಲು ಶುರುವಾದರು. ಎಲ್ಲ ಪೂಜೆಗಳು ಮುಗಿದ ಮೇಲೆ  ಎಂದಿನಂತೆ ಕೆಂಡ ತುಳಿಯುವ ಕಾರ್ಯಕ್ರಮ . ಮೊದಲ ಬಾರಿಗೆ ಇದನ್ನು ನೋಡುತ್ತಿದ್ದ ಕಿರಣ್ ಗೆ ಕುತೂಹಲ, ಇದಕ್ಕೆ ಮೊದಲು ಅನೇಕ ಬಾರಿ ಇನ್ನು ನೂಕುನುಗ್ಗಲ್ಲಲ್ಲಿ ಇದನ್ನು ನೋಡಿ ಕುಶಿ ಅನುಭವಿಸಿದ್ದ  ನಾನು ಎ ಬಾರಿ ಫೋಟೋ ಮತ್ತು ವೀಡಿಯೊ ತೆಗೆಯುವುದರಲ್ಲಿ ಮಗ್ನಳಾಗಿದ್ದೆ .

ಕೊನೆಯ ಹೆಂಗಸು ಕೆಂಡ ಹಾಯುವುದನ್ನು ನೋಡಿ , ನಾನು ಕಿರಣ್ ಮನೆಗೆ ಹೊರಡೋಣವೆಂದು ಕಾರಿನ ಕಡೆಗೆ ನಡೆದುಕೊಂಡು ಹೋಗುವಾಗ ಬೆಳಿಗ್ಗೆಇಂದ ಸುಮ್ಮನಿದ್ದ ಕಿರಣ್ , ನೀನು ಹೇಳಿದ ಸಣ್ಣ ಗುಡಿ , ಸಣ್ಣ ಕಾಡು(ಬನ) , ಕಾಲಿಡಲು ಜಾಗವಿಲ್ಲದಸ್ತು  ಜನ ಎಲ್ಲ ಸುಳ್ಳು ಕೇವಲ ಕೆಂಡ ತುಳಿಯುವುದೊನ್ದೆ  ಸತ್ಯ ಎಂದು ಗೇಲಿ ಮಾಡಿ ನಕ್ಕರು. ಸುಮಾರು ೧೨ ವರ್ಷಗಳ ಹಿಂದೆ ನಾನು ನೋಡಿದ್ದ  ಆಚರ, ವಿಚಾರ,ಪದತ್ತಿ ,ದೇವಸ್ತಾನ , ಊರ ಹಬ್ಬ ,ಅಮ್ಮನ ಹಬ್ಬ , ಬಂಶಕರಿ ಜಾತ್ರೆ ಈಗ ಸಂಪೂರ್ಣವಾಗಿ ಬದಲಾಗಿರುವುದು ನೋಡಿ -    ಬದಲಾವಣೆಯೊಂದೇ ಶಾಶ್ವತ ಎಂದುಕೊಂಡು ಕಾರು ಹತ್ತಿದೆ . ಆದರೆ ಈ ಬದಲಾವಣೆ ದೇವರಿಗೂ(ದೇವರ ಕಾರ್ಯಕ್ಕೂ)ಬೇಕೆ ?

ಇತ್ತೀಚಿಗೆ ತೆಗೆದ ದೇವಸ್ಥಾನದ ಕೆಲವು ಚಿತ್ರಗಳು